ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಚ್ಚಾಲಿ ಗ್ರಾಮದಲ್ಲಿ ಆರಾಧ್ಯ ದೈವ ಶ್ರೀ ಶ್ರೀ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಆದಿಶಕ್ತಿ ದೇವಿಯ ಮೆರವಣಿಗೆ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಜರುಗಿತು.
ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಮಹೋತ್ಸವದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಭಾಗವಹಿಸಿ, ಶ್ರೀಗಳ ಆಶೀರ್ವಾದ ಪಡೆದು ಆದಿಶಕ್ತಿ ದೇವಿಗೆ ಭಕ್ತಿ ಸಮರ್ಪಿಸಿದರು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಆಚರಣೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಅಡ್ಡಪಲ್ಲಕ್ಕಿ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ನಮ್ಮ ನಾಡಿನ ಗುರುಪರಂಪರೆ, ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪವಿತ್ರ ಉತ್ಸವವಾಗಿದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನ ನೀಡಲಾಗಿದೆ. ಗುರು ಎಂದರೆ ಕೇವಲ ಜ್ಞಾನವನ್ನು ಬೋಧಿಸುವ ವ್ಯಕ್ತಿಯಲ್ಲ. ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನ ಕಡೆಗೆ ಮನುಷ್ಯನನ್ನು ಮುನ್ನಡೆಸುವ ಮಾರ್ಗದರ್ಶಕ ಶಕ್ತಿಯಾಗಿದ್ದಾರೆ. ‘ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ’ ಎಂಬ ಮಾತಿನಂತೆ ಗುರುಗಳಲ್ಲಿ ದೈವತ್ವವನ್ನು ಕಾಣುವ ಪರಂಪರೆ ನಮ್ಮ ನಾಡಿನ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ನಡೆಯುವ ಇಂತಹ ಧಾರ್ಮಿಕ ಮಹೋತ್ಸವಗಳು ಜನರಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟನ್ನು ಗಟ್ಟಿಗೊಳಿಸುತ್ತವೆ. ಹಿರಿಯರು ಉಳಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ನಡೆದ ಆದಿಶಕ್ತಿ ದೇವಿಯ ಮೆರವಣಿಗೆಯು ಗ್ರಾಮದ ಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬಿಚ್ಚಾಲಿ ಗ್ರಾಮದ ಹಿರಿಯ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



