ರಾಯಚೂರು: ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಶ್ರೀ ಅವಧೂತ ರಾಜಯೋಗಿ ಸಂತ ನಾಮದೇವಗೌಡ ಶರಣರ ಅಂಬಾ ಮಠದ ವಿರುದ್ಧ ಕೆಲವರು ರಾಜಕೀಯ ದುರುದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಠದ ಮಹಿಳಾ ಭಕ್ತರು ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯರಾಣಿ, ಹನುಮಗೌಡ ಹಾಗೂ ಸಿದ್ದನಗೌಡ ಮೂಡಲಗುಂಡ ನೇತೃತ್ವದ ಕೆಲವರು ಶ್ರೀಶೈಲ ಭಕ್ತರ ಸಂಚಾಲಕರ ಸಮಿತಿ ಹೆಸರಿನಲ್ಲಿ ಮಠದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.

ಹನುಮಗೌಡ ಈ ಹಿಂದೆ ನಾಮದೇವಗೌಡ ಶರಣರ ಶಿಷ್ಯನಾಗಿ ಮಠದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇದೀಗ ಗುರುಗಳಿಂದ ಹಣಕ್ಕೆ ಬೇಡಿಕೆಯಿಟ್ಟು, ಅವರ ಪ್ರವಚನದ ವಿಡಿಯೊವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಹಿಳಾ ಭಕ್ತರ ಒತ್ತಾಯದ ಮೇರೆಗೆ ಗುರುಗಳು ಭಜನಾ ಪದವೊಂದರ ಅರ್ಥವನ್ನು ಗ್ರಾಮೀಣ ಭಾಷೆಯಲ್ಲಿ ವಿವರಿಸಿದ್ದರು. ಅದರ ಒಂದು ಭಾಗವನ್ನು ಮಾತ್ರ ಕತ್ತರಿಸಿ ತಪ್ಪಾಗಿ ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಬಾ ಮಠವು ಜಾತಿ, ಧರ್ಮದ ಭೇದವಿಲ್ಲದೆ ಸರ್ವಧರ್ಮ ಸಾಮೂಹಿಕ ವಿವಾಹ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಧಾರ್ಮಿಕ ಪ್ರವಚನ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮೂಢನಂಬಿಕೆ, ಮದ್ಯಪಾನ, ಜೂಜಾಟ ಮತ್ತು ಬಾಲ್ಯವಿವಾಹದ ವಿರುದ್ಧ ಗುರುಗಳು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಮಠದ ಜಮೀನಿನ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಠರಾವು ಅಂಗೀಕರಿಸಿ ಕಂದಾಯ ಇಲಾಖೆಗೆ ಪತ್ರ ಸಲ್ಲಿಸಲಾಗಿದೆ. ಜಾಗದ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಠದ ವಿರುದ್ಧ ಅಪಪ್ರಚಾರ ಮುಂದುವರಿದರೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ದೇವದುರ್ಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಚನ್ನಮ್ಮ ಅರಕೇರಾ, ಭೀಮಮ್ಮ ಕಲಮಗೇರಾ, ಬಸಮ್ಮ ಗೆದ್ದಲಮಾರಿ, ರತ್ನಮ್ಮ, ರಣಮ್ಮ, ಮಂಜಮ್ಮ ಹಾಗೂ ಚನ್ನಮ್ಮ ಮದರಕಲ್ ಉಪಸ್ಥಿತರಿದ್ದರು.