ರಾಯಚೂರು: ತಾಲೂಕಿನ ಯರಮರಸ್ನ ನಳಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ದ್ವಿತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿರುವ ಮೂರು ದಿನಗಳ ಯೋಗ ತರಬೇತಿ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಪತಂಜಲಿ ಯೋಗ ಸಮಿತಿಯ ರಾಯಚೂರು ಜಿಲ್ಲಾಧ್ಯಕ್ಷ ಋತುರಾಜ್ ಗೌಡ ಹಾಗೂ ಲಕ್ಷ್ಮಿ ನಾರಾಯಣ ಅವರು ಶಿಬಿರವನ್ನು ಉದ್ಘಾಟಿಸಿ, ಯೋಗಾಭ್ಯಾಸದ ಮಹತ್ವದ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಸದೃಢತೆ ಹಾಗೂ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅತ್ಯಂತ ಸಹಕಾರಿಯಾಗಿದೆ. ನಿಯಮಿತವಾಗಿ ಯೋಗ ಮಾಡುವುದರಿಂದ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲಿರುವ ಪ್ರಶಿಕ್ಷಣಾರ್ಥಿಗಳು ಯೋಗವನ್ನು ತಮ್ಮ ನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಜೊತೆಗೆ ಶಾಲಾ ಮಕ್ಕಳಲ್ಲಿಯೂ ಯೋಗದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಯಿತು. ಯೋಗಾಭ್ಯಾಸದ ವಿಧಾನಗಳು ಹಾಗೂ ಅವುಗಳಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಪ್ಪ ಜೇಗರ್, ಉಪನ್ಯಾಸಕರು ಹಾಗೂ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



