ರಾಯಚೂರು: ನಗರದ ಕಿಲ್ಲೇ ಬೃಹನ್ಮಠದಲ್ಲಿ ವಿಜಯದಶಮಿ ಹಬ್ಬವನ್ನು ಶ್ರೀಮಠದ ಪೀಠಾಧಿಪತಿ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ಹಾಗೂ ಸಾಂಪ್ರದಾಯಿಕ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು.
ಶ್ರೀಮಠದ ಕಾರ್ಯದರ್ಶಿ ವೇ.ಮೂ. ರೇಣುಕಾರಾಧ್ಯಯ್ಯ ಸ್ವಾಮಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಹಾಮಂಗಳಾರತಿ ನೆರವೇರಿಸಿ, ಶ್ರೀಮಠದ ಸಾಂಪ್ರದಾಯಿಕ ಖಡ್ಗದಿಂದ ಬನ್ನಿ ಮಹಾಂಕಾಳಿಯ ಒಂದು ಕೊಂಬೆಯ ಬನ್ನಿ ಪತ್ರಿಯನ್ನು ಕತ್ತರಿಸಿ ದೇವಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ನೆಮ್ಮದಿ ದೊರೆಯಲಿ. ಹಿಂಗಾರು ಮಳೆ ಸಮೃದ್ಧವಾಗಿ ಸುರಿದು ರೈತರ ಬದುಕಿನಲ್ಲಿ ಸಂತಸ ಮೂಡಲಿ ಎಂದು ಮಹಾಸ್ವಾಮಿಗಳು ಪ್ರಾರ್ಥಿಸಿದರು.
ನಂತರ ಜಗದ್ಗುರು ರೇಣುಕಾಚಾರ್ಯರು ಹಾಗೂ ಲಿಂ. ಗುರುಪಾದೇಶ್ವರರ ಮೂರ್ತಿಗಳಿಗೆ ಬನ್ನಿ ಸಮರ್ಪಿಸಲಾಯಿತು. ಶ್ರೀಮಠದಲ್ಲಿ ಪ್ರತಿಷ್ಠಾಪಿಸಿರುವ ತಾಯಿ ಶಾಂಭವಿಯ ರಜತ ಮೂರ್ತಿ ಹಾಗೂ ಘಟಸ್ಥಾಪನೆ ಮಾಡಿರುವ ಚಾಮುಂಡಿ ದೇವಿಗೂ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ವೇ.ಮೂ. ಪಂಪಾಪತಿ ಶಾಸ್ತ್ರಿಗಳು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಶ್ರೀಮಠದ ಭಕ್ತರು ಮಹಾಸ್ವಾಮಿಗಳಿಗೆ ಬನ್ನಿ ಪತ್ರಿ ಹಾಗೂ ಭಕ್ತಿ ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು.
ಪೂಜಾ ಕಾರ್ಯಕ್ರಮದ ಬಳಿಕ ಶ್ರೀಮಠದ ಆವರಣದಲ್ಲಿ ಭಕ್ತರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡರು. ‘ಬನ್ನಿ ತಗೊಂಡು ಬಂಗಾರವಾಗಿರೋಣ, ನಮ್ಮ ಬನ್ನಿ ನಿಮ್ಮ ಬಾಳಲ್ಲಿ ಬಂಗಾರವಾಗಲಿ’ ಎಂದು ಶುಭ ಹಾರೈಸುವ ಮೂಲಕ ವಿಜಯದಶಮಿ ಹಬ್ಬದ ಸಂಪ್ರದಾಯವನ್ನು ಆಚರಿಸಿದರು.
ದೈನಂದಿನ ಜೀವನದಲ್ಲಿನ ದ್ವೇಷ, ಅಸೂಯೆ ಹಾಗೂ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದದಿಂದ ಬಾಳುವ ಸಂದೇಶವನ್ನು ಬನ್ನಿ ವಿನಿಮಯದ ಮೂಲಕ ಸಾರಲಾಯಿತು.
ನೂರಾರು ಭಕ್ತರು ಹೊಸ ಉಡುಪುಗಳನ್ನು ಧರಿಸಿ ಶ್ರೀಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವಿಜಯದಶಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು.



