ರಾಯಚೂರು: ನಾಡಹಬ್ಬ ದಸರಾ ಪ್ರಯುಕ್ತ ತಾಲೂಕಿನ ಸಿದ್ರಾಂಪೂರು ಗ್ರಾಮದಲ್ಲಿ ಸನ್ನಿ ಮಹಾರಾಜ್ ಯೂಥ್ ಫೋರ್ಸ್ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಕೇಶವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಸೈದಾಪೂರು ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಸೈದಾಪೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ದಸರಾ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಕಬಡ್ಡಿ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದವು. ವಿಶೇಷವಾಗಿ ಅಂತಿಮ ಪಂದ್ಯದಲ್ಲಿ ಬೆಂಗಳೂರು ಹಾಗೂ ಸೈದಾಪೂರು ತಂಡಗಳ ನಡುವಿನ ಪೈಪೋಟಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಪ್ರಾಯೋಜಕ ಹಾಗೂ ಯುವ ಮುಖಂಡ ಸನ್ನಿ ಮಹಾರಾಜ್ ಅವರು ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.
ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಕೇಶವ ತಂಡಕ್ಕೆ ₹60 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಸೈದಾಪೂರು ತಂಡಕ್ಕೆ ₹40 ಸಾವಿರ ಹಾಗೂ ಟ್ರೋಫಿ ನೀಡಲಾಯಿತು. ತೃತೀಯ ಸ್ಥಾನ ಗಳಿಸಿದ ಮಾನ್ವಿ ತಂಡಕ್ಕೆ ₹20 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹10 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸನ್ನಿ ಮಹಾರಾಜ್, ಗ್ರಾಮೀಣ ಭಾಗದ ಯುವಕರಲ್ಲಿ ಅಪಾರ ಕ್ರೀಡಾ ಪ್ರತಿಭೆಯಿದ್ದು, ಅವರಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಇಂತಹ ಕ್ರೀಡಾಕೂಟಗಳ ಮೂಲಕ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಯುವಕರಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಒಗ್ಗಟ್ಟಿನ ಮನೋಭಾವ ಮೂಡಿಸುವುದು ಅಗತ್ಯವಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಅಗತ್ಯ ಪ್ರೋತ್ಸಾಹ ನೀಡುವ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಮುಖಂಡರು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.



