ರಾಯಚೂರು: ತಾಲೂಕಿನ ಕುಕನೂರು ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಿಯ ನೂತನ ಪಂಚಲೋಹದ ಮೂರ್ತಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು.
ಸುಮಾರು 21 ಕೆಜಿ ತೂಕದ ಸಿಂಹಾರೂಢಿಣಿ ಶ್ರೀ ಮಾರಿಕಾಂಬಾ ದೇವಿಯ ಪಂಚಲೋಹದ ಮೂರ್ತಿಯನ್ನು ಶಕ್ತಿನಗರದಿಂದ ತರಲಾಗಿದ್ದು, ಗ್ರಾಮದ ಸರಹದ್ದುದಿಂದ ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಡೊಳ್ಳು ಹಾಗೂ ಸಾಂಪ್ರದಾಯಿಕ ವಾದ್ಯಮೇಳಗಳೊಂದಿಗೆ ನೂರಾರು ಮುತ್ತೈದೆಯರು ಪೂರ್ಣಕುಂಭ ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು, ಊರ ಹೊರವಲಯದಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ತರಲಾಯಿತು. ಬಳಿಕ ದೇವಿಯ ನೂತನ ಮೂರ್ತಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು.
ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ವಿಜಯದಶಮಿ ಪ್ರಯುಕ್ತ ಸಂಜೆ ಗ್ರಾಮದ ಶಕ್ತಿಮಂದಿರದಿಂದ ರಾಮಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಶಮಿವೃಕ್ಷದವರೆಗೆ ಭಜನಾ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಮೂಲಕ ಗ್ರಾಮಸ್ಥರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಅರ್ಚಕರು, ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



