ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಶುಕ್ರವಾರ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಹಾಗೂ ಚುನಾವಣಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ನಗರದ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 140 ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ತೆರಳಿದ ಅವರು, ಮತದಾನದ ಸ್ಥಿತಿಗತಿ, ಮತದಾರರಿಗೆ ಒದಗಿಸಿರುವ ಮೂಲಸೌಕರ್ಯಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆದುಕೊಂಡರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಪರ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಾಸಕ ದದ್ದಲ್ ಅವರು, ಶಿಕ್ಷಕ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಮಹತ್ವವಿದ್ದು, ಶಿಕ್ಷಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಕಾಂಗ್ರೆಸ್ ಮುಖಂಡರು ರುದ್ರಪ್ಪ ಅಂಗಡಿ, ಜಯಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.