ರಾಯಚೂರು: ಕಿತ್ತೂರು ರಾಣಿ ಚೆನ್ನಮ್ಮನವರ ಶೌರ್ಯ, ಸ್ವಾಭಿಮಾನ ಹಾಗೂ ದೇಶಪ್ರೇಮ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದು, ವಿದ್ಯಾರ್ಥಿನಿಯರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚನ್ನಬಸಮ್ಮ ಎಂ. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಹೇಳಿದರು.
ನಗರದ ತಾರನಾಥ ಶಿಕ್ಷಣ ಸಂಸ್ಥೆಯ ಸಂಚಾಲಿತ ಚನ್ನಬಸಮ್ಮ ಎಂ. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮನವರು 1778ರ ಅಕ್ಟೋಬರ್ 23ರಂದು ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿವರಸೆ ಹಾಗೂ ಬಿಲ್ಲುವಿದ್ಯೆಯಲ್ಲಿ ಪರಿಣತಿ ಹೊಂದಿದ್ದ ಅವರು, ಕಿತ್ತೂರಿನ ರಾಜ ಮಲ್ಲಸರ್ಜ ಅವರನ್ನು ವಿವಾಹವಾಗಿ ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ರಿಟಿಷರ ಅನ್ಯಾಯದ ನೀತಿಯನ್ನು ವಿರೋಧಿಸಿ ತಮ್ಮ ರಾಜ್ಯದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ಮಹಿಳೆಯಾಗಿದ್ದಾರೆ ಎಂದು ತಿಳಿಸಿದರು.
ಬ್ರಿಟಿಷರು ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ಎಂಬ ನೀತಿಯ ಮೂಲಕ ಕಿತ್ತೂರನ್ನು ವಶಪಡಿಸಿಕೊಳ್ಳಲು ಮುಂದಾದಾಗ ಚೆನ್ನಮ್ಮನವರು ಧೈರ್ಯದಿಂದ ಎದುರಿಸಿದರು. ಅವರ ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಗುರಸಿದ್ದಪ್ಪ ಅವರಂತಹ ವೀರರು ಬೆಂಬಲವಾಗಿ ನಿಂತಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಚೆನ್ನಮ್ಮನವರು ತೋರಿದ ಸಾಹಸ ಇಂದಿಗೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಬ್ರಿಟಿಷರ ಕುತಂತ್ರದಿಂದ ಬಂಧನಕ್ಕೊಳಗಾದ ಚೆನ್ನಮ್ಮನವರು ಬೈಲಹೊಂಗಲದ ಕೋಟೆಯಲ್ಲಿ ಸೆರೆವಾಸ ಅನುಭವಿಸಿ, 1829ರ ಫೆಬ್ರವರಿ 2ರಂದು ಕೊನೆಯುಸಿರೆಳೆದರು. ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತರಲ್ಲ, ದೇಶವನ್ನು ಮುನ್ನಡೆಸುವ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಚೆನ್ನಮ್ಮನವರು ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿನಿಯರು ಶ್ರದ್ಧೆಯಿಂದ ಶಿಕ್ಷಣ ಪಡೆದು, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಕೀರ್ತಿ ಟಿ., ಅಕ್ಷತಾ, ಅಂಜಲಿ ಹಾಗೂ ಶೃತಿ ಅವರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಹಾರ ಹಾಕಿ ಗೌರವ ಸಲ್ಲಿಸಿದರು. ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿಯರಾದ ಸಲ್ಮಾಬಾನು, ಶಿವಲೀಲಾ, ರಾಘಮ್ಮ, ಅನ್ನಪೂರ್ಣ, ಸರಸ್ವತಿ, ವಾಹಿದಾ ಬೇಗಂ, ಚಂದ್ರಕಲಾ, ಉಪನ್ಯಾಸಕ ಗೋವಿಂದರಾಜ್, ಬೋಧಕೇತರ ಸಿಬ್ಬಂದಿಗಳಾದ ಶೈಲಾಶ್ರೀ, ಇಮ್ರಾನ್ ಪಾಷಾ, ಸಂಗಯ್ಯ ಸ್ವಾಮಿ, ರೋಹಿತ್, ಭಾಗ್ಯಮ್ಮ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



