ರಾಯಚೂರು: ಸಿಗರೇಟ್ ಉದ್ರಿ ನೀಡಲು ನಿರಾಕರಿಸಿದ ಕಾರಣಕ್ಕೆ ಕಿರಾಣಿ ಅಂಗಡಿ ಮಾಲೀಕನೊಂದಿಗೆ ಜಗಳ ತೆಗೆದ ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಎಲ್‌ಬಿಎಸ್ ನಗರದ ಕ್ರೌನ್ ಬೇಕರಿ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ.

ನಗರದ ಎಲ್‌ಬಿಎಸ್ ಬಡಾವಣೆಯ ನಿವಾಸಿ ನರಸಿಂಹ (40) ಕೊಲೆಯಾದ ದುರ್ದೈವಿ. ಅಂಗಡಿಗೆ ಬಂದ ಯುವಕನೊಬ್ಬ ಸಿಗರೇಟ್ ಉಧಾರಿ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಅಂಗಡಿ ಮಾಲೀಕ ನರಸಿಂಹ ನಿರಾಕರಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಯುವಕ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಸಣ್ಣಪುಟ್ಟ ಉಧಾರಿ ವಿಚಾರಕ್ಕೆ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿರುವುದು ಬಡಾವಣೆಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಕೃತ್ಯ ಎಸಗಿದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಆರೋಪಿಯು ಗಾಂಜಾ ಅಮಲಿನಲ್ಲಿದ್ದ ಎನ್ನುವ ಮಾತುಗಳು ಸ್ಥಳೀಯರಿಂದ ಕೇಳಿಬಂದಿದ್ದು, ಈ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ. ಕೊಲೆಗೆ ಉಧಾರಿ ವಿಚಾರವೇ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಡಿವೈಎಸ್‌ಪಿ ಶಾಂತವೀರ, ಸಿಪಿಐ ಉಮೇಶ ಕಾಂಬ್ಳೆ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲೀಕನ ಪ್ರಾಣ ತೆಗೆದಿರುವ ಘಟನೆ ನಗರದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಯಾರ್ಡ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.