ರಾಯಚೂರು: ನಗರದ ಮಂತ್ರಾಲಯ ರಸ್ತೆಯ ಮಾರುತಿ ನಗರ ಸ್ಮಶಾನದಲ್ಲಿ ಹೂಳಲಾಗಿದ್ದ ಶವಗಳ ಅವಶೇಷಗಳನ್ನು ಅನಧಿಕೃತವಾಗಿ ಹೊರತೆಗೆದು ಸಾಗಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ನೇತಾಜಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಹನುಮಯ್ಯ ತಳವಾರ ಹಾಗೂ ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಎಂದು ಹೇಳಲಾದ ರಾಜು ಮತ್ತು ಅಫ್ಸರ್ ಎಂಬುವವರು ಪೊಲೀಸರ ವಶದಲ್ಲಿದ್ದಾರೆ. ಹೂಳಲಾಗಿದ್ದ ಶವಗಳ ಮೂಳೆಗಳು ಸೇರಿದಂತೆ ದೇಹದ ಇತರ ಭಾಗಗಳನ್ನು ವೈದ್ಯಕೀಯ ಸಂಶೋಧನೆಗಾಗಿ ಸಾಗಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಮಶಾನದಿಂದ ಶವಗಳ ಅವಶೇಷಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ನೇತಾಜಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಸ್ಮಶಾನದ ಸಿಬ್ಬಂದಿಗೆ ಹಣ ನೀಡಿ ಶವಗಳ ಅವಶೇಷಗಳನ್ನು ಪಡೆಯಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಡಾವಣೆ ಮುಖಂಡ ರವೀಂದ್ರ ಜಲ್ದಾರ್, ಹಲವು ದಿನಗಳಿಂದ ಸ್ಮಶಾನದಲ್ಲಿ ಹೂತ ಶವಗಳ ಅವಶೇಷಗಳನ್ನು ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದವು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಸ್ಮಶಾನದಲ್ಲಿ ಹೂಳಲಾದ ಶವಗಳ ಅವಶೇಷಗಳನ್ನು ಅನುಮತಿಯಿಲ್ಲದೆ ಹೊರತೆಗೆಯುವುದು ಗಂಭೀರ ವಿಷಯವಾಗಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ, ಯಾವ ಉದ್ದೇಶಕ್ಕಾಗಿ ಅವಶೇಷಗಳನ್ನು ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರವೀಂದ್ರ ಜಲ್ದಾರ್ ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನೇತಾಜಿ ನಗರ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಶವಗಳ ಅವಶೇಷಗಳ ಸಾಗಾಟದ ಹಿಂದಿನ ನಿಖರ ಉದ್ದೇಶ ಹಾಗೂ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.



