ರಾಯಚೂರು: ನಗರದ ಆಶಾಪುರ ರಸ್ತೆಯ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ಬಡಾವಣೆಯ ಶ್ರೀ ಏಳು ಮಕ್ಕಳ ತಾಯಾಂಭಿಕಾ ದೇವಸ್ಥಾನದ ಆವರಣದಲ್ಲಿ ಮಲ್ಲಿಕಾರ್ಜುನ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ಎಂಟು ದಿನಗಳ ಉಚಿತ ಯೋಗ ಮತ್ತು ಪ್ರಾಣಾಯಾಮ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನ ಹಾಗೂ ಬಡಾವಣೆ ಸಂಘದ ಅಧ್ಯಕ್ಷ ಮರೇಗೌಡ ಪಾಟೀಲ ಅವರ ನೇತೃತ್ವದಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ಪತಂಜಲಿ ಯೋಗ ಸಮಿತಿಯ ನಗರ ಸಂಚಾಲಕ ಹಾಗೂ ಯೋಗಗುರು ಪರಮೇಶ್ವರ ಸಾಲಿಮಠ ಅವರು ಶಿಬಿರಾರ್ಥಿಗಳಿಗೆ ಶುಭೋದಯ ಕೋರುವ ಮೂಲಕ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 5.30ರಿಂದ 7.30ರವರೆಗೆ ನಡೆದ ಶಿಬಿರದಲ್ಲಿ ವಿವಿಧ ಯೋಗಾಸನಗಳು ಹಾಗೂ ಪ್ರಾಣಾಯಾಮದ ಅಭ್ಯಾಸ ಮಾಡಿಸಲಾಯಿತು.
ಯೋಗಗುರು ಪರಮೇಶ್ವರ ಸಾಲಿಮಠ ಅವರು ತಮ್ಮ ಹಾಸ್ಯಮಿಶ್ರಿತ ಮಾತುಗಳ ಮೂಲಕ ಶಿಬಿರಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದರು. ಯೋಗಾಭ್ಯಾಸದ ನಡುವೆ ಹಾಸ್ಯಭರಿತ ನುಡಿಗಳ ಮೂಲಕ ಎಲ್ಲರನ್ನೂ ನಗಿಸುತ್ತಾ, ಆಸಕ್ತಿಯಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಶಿಬಿರದಲ್ಲಿ ಸೂರ್ಯ ನಮಸ್ಕಾರ, ವಜ್ರಾಸನ, ಮಂಡೂಕಾಸನ, ತ್ರಿಬಂಧಾಸನ, ಪ್ರಾಣಾಯಾಮ, ಕಠಿನಾಸನ, ಚಪ್ಪಾಳೆ ತಟ್ಟುವುದು, ಸಿಂಹಗರ್ಜನೆ ಹಾಗೂ ಹಾಸ್ಯಾಸನ ಸೇರಿದಂತೆ ವಿವಿಧ ಆಸನಗಳನ್ನು ಸ್ವತಃ ಪ್ರದರ್ಶಿಸಿ ಶಿಬಿರಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.
ಬಳಿಕ ಮಾತನಾಡಿದ ಯೋಗಗುರು ಪರಮೇಶ್ವರ ಸಾಲಿಮಠ, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಚೈತನ್ಯದಿಂದ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಯೋಗವು ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮಹತ್ವದ ಪದ್ಧತಿಯಾಗಿದೆ. ಪ್ರಾಚೀನ ಕಾಲದ ಋಷಿಮುನಿಗಳು ಯೋಗ ಮತ್ತು ಧ್ಯಾನದ ಮೂಲಕ ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದರು. ಧ್ಯಾನವು ಮನಸ್ಸಿನ ಏಕಾಗ್ರತೆ ಹಾಗೂ ನೆಮ್ಮದಿಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ವಿಭಾಗದ ಪ್ರಭಾರಿಗಳು, ಯೋಗ ಸಾಧಕರು, ಯೋಗ ಶಿಕ್ಷಕರು ಹಾಗೂ ಬಡಾವಣೆಯ ನಿವಾಸಿಗಳಾದ ಚಂದ್ರಶೇಖರ ರೆಡ್ಡಿ, ನಿವೃತ್ತ ರೈಲ್ವೆ ಉದ್ಯೋಗಿ ಮಹಾದೇವಪ್ಪ, ಕೃಷ್ಣ ಕುರ್ಡಿಕರ್, ಎಚ್.ಎಂ. ಕೃಷ್ಣ ಶಾವಂತಗೇರಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಹಿರಿಯ ಪತ್ರಕರ್ತ ಭೀಮರಾವ್ ಹದ್ದಿನಾಳ, ಅಣ್ಣಾರಾವ್ ಎ.ಡಿ., ನರಸಪ್ಪ ಪಿಡಿಒ, ರವಿ ಮೆಡಿಕಲ್, ಶೈಲಜಾ, ಶೃತಿ, ಪದ್ಮಾ, ರಾಮೇಶ್ವರಿ, ಅನಿತಾ, ವಿಜಯಲಕ್ಷ್ಮಿ, ಉಮಾಮಹೇಶ್ವರಿ, ನಾಗಲಕ್ಷ್ಮಿ, ಸುನಂದಾ ಸೇರಿದಂತೆ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.



