ರಾಯಚೂರು: ನಗರದ ಎಲ್ಬಿಎಸ್ ಬಡಾವಣೆಯ ಕ್ರೌನ್ ಬೇಕರಿ ಸಮೀಪ ಶನಿವಾರ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಾಪಾರಿ ನರಸಿಂಹ ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಿಲಕ್ ಸಿಂಗ್ನನ್ನು ಪೊಲೀಸರು ಮಧ್ಯರಾತ್ರಿ ಬಂಧಿಸಿದ್ದಾರೆ.
ಕೊಲೆ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರ ಮಾರ್ಗದರ್ಶನದಲ್ಲಿ ಆರು ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವಿವಿಧೆಡೆ ತೀವ್ರ ಹುಡುಕಾಟ ನಡೆಸಿದ ಪೊಲೀಸರು ತಡರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿಸಿ, ಮಧ್ಯರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ತುಂಗ ಬಿಂಬ ಪತ್ರಿಕೆಯ ವರದಿಗಾರರು ಡಿವೈಎಸ್ಪಿ ಶಾಂತವೀರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಕೊಲೆ ಪ್ರಕರಣದ ಆರೋಪಿ ತಿಲಕ್ ಸಿಂಗ್ನನ್ನು ಬಂಧಿಸಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಗೆ ನಿಖರ ಕಾರಣ ಹಾಗೂ ಘಟನೆಯ ಹಿಂದಿನ ಇತರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.



