ರಾಯಚೂರು, ಅ.25: ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಜಾರಿಗೊಳಿಸಿರುವ ಒಳಮೀಸಲಾತಿ ಮಾದರಿಯಲ್ಲಿಯೇ ಗ್ರಾಮ ಪಂಚಾಯಿತಿ ಸೇರಿದಂತೆ ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳಿಗೆ ರಾಜಕೀಯ ಒಳಮೀಸಲಾತಿ ಕಲ್ಪಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ವಕೀಲ ಎಸ್. ಮಾರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ರಾಜಕೀಯ ಅಧಿಕಾರದಲ್ಲಿ ನ್ಯಾಯಯುತ ಪಾಲು ದೊರೆಯಬೇಕಾದರೆ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಆಧಾರದಲ್ಲಿ ಒಳಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ಮಹತ್ವದ ತೀರ್ಪು ನೀಡಿದೆ. ಅದರಂತೆ ರಾಜ್ಯ ಸರ್ಕಾರ 2025ರ ಆಗಸ್ಟ್ 25ರಂದು ಒಳಮೀಸಲಾತಿ ಸಂಬಂಧ ಆದೇಶ ಹೊರಡಿಸಿತ್ತು. ಆದರೆ 2026ರ ಫೆಬ್ರವರಿ 27ರಂದು ಆ ಆದೇಶವನ್ನು ಹಿಂಪಡೆಯಲಾಯಿತು. ಬಳಿಕ ಮೇ 8 ಮತ್ತು 13ರಂದು ಕೈಗೊಂಡ ಕ್ರಮಗಳ ಅನ್ವಯ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಪ್ರವರ್ಗ-ಎಗೆ ಶೇ.5.25, ಪ್ರವರ್ಗ-ಬಿಗೆ ಶೇ.5.25 ಮತ್ತು ಪ್ರವರ್ಗ-ಸಿಗೆ ಶೇ.4.5ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳಲ್ಲಿ ಒಳಮೀಸಲಾತಿ ಕಲ್ಪಿಸಿರುವ ಸರ್ಕಾರ, ರಾಜಕೀಯ ಕ್ಷೇತ್ರದಲ್ಲಿಯೂ ಅದೇ ಸಾಮಾಜಿಕ ನ್ಯಾಯದ ತತ್ವವನ್ನು ಅನುಸರಿಸಬೇಕು. ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯಗಳಿಗೂ ಪ್ರತ್ಯೇಕ ರಾಜಕೀಯ ಒಳಮೀಸಲಾತಿ ಒದಗಿಸಿದರೆ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳಿಗೂ ಅಧಿಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗದಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯಗಳ ಅಭ್ಯರ್ಥಿಗಳು ರಾಜಕೀಯ ಪ್ರಾಬಲ್ಯ ಹೊಂದಿರುವ ಸಮುದಾಯಗಳ ಪ್ರಭಾವದಿಂದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಪ್ರತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಸುಮಾರು 20ರಿಂದ 25 ಸ್ಥಾನಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಆರೋಪಿಸಿದರು.

1993ರಲ್ಲಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಉದ್ದೇಶವೇ ಸಮಾಜದ ಎಲ್ಲ ವರ್ಗಗಳಿಗೂ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಒದಗಿಸಿರುವಂತೆಯೇ ಪರಿಶಿಷ್ಟ ಜಾತಿಯೊಳಗಿನ ವಿವಿಧ ಸಮುದಾಯಗಳಿಗೂ ನ್ಯಾಯಯುತ ಪ್ರಾತಿನಿಧ್ಯ ಸಿಗುವ ವ್ಯವಸ್ಥೆ ರೂಪಿಸಬೇಕಾಗಿದೆ ಎಂದರು.

2026-27ನೇ ಸಾಲಿನಲ್ಲಿ ನಡೆಯಲಿರುವ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಪ್ರವರ್ಗ-ಎಗೆ ಶೇ.5.25, ಪ್ರವರ್ಗ-ಬಿಗೆ ಶೇ.5.25 ಹಾಗೂ ಪ್ರವರ್ಗ-ಸಿಗೆ ಶೇ.4.5ರಷ್ಟು ರಾಜಕೀಯ ಒಳಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕು. ಈ ವಿಷಯದಲ್ಲಿ ವಿಳಂಬ ಮಾಡದೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಎಸ್. ಮಾರಪ್ಪ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಹೇಮರಾಜ್ ಆಸ್ಕಿಹಾಳ್, ರವೀಂದ್ರನಾಥ ಪಟ್ಟಿ, ಎಂ.ಆರ್. ಬೇರಿ, ಶರಣಪ್ಪ ದಿನ್ನಿ, ನರಸಿಂಹಲು ಮರ್ಚೆಟಹಾಳ್, ಆಂಜಿನಯ್ಯ ಉಟ್ಟೂರು, ನರಸಿಂಹಲು ನೆಲಹಾಳ್, ಶ್ರೀನಿವಾಸ ಕೊಪ್ಪರ, ತಾಯಪ್ಪ ಗಧಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.