ರಾಯಚೂರು, ಅ.25: ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಸಮುದಾಯಗಳ ಸರ್ವಾಂಗೀಣ ಪ್ರಗತಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಹಿಂದಿನ ಸರ್ಕಾರ ಘೋಷಿಸಿದ್ದ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಕೂಡಲೇ ಕಾರ್ಯರೂಪಕ್ಕೆ ತಂದು, ಸಮರ್ಪಕ ಅನುದಾನ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 50ರಿಂದ 60 ಸಾವಿರ ನೇಕಾರ ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕ ಕುಟುಂಬಗಳು ಸಾಂಪ್ರದಾಯಿಕ ನೇಕಾರಿಕೆ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿವೆ. ಆರ್ಥಿಕ ಸಂಕಷ್ಟದಿಂದಾಗಿ ಅನೇಕ ಕುಟುಂಬಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಇಂತಹ ಕುಟುಂಬಗಳ ಬದುಕಿಗೆ ಭದ್ರತೆ ಒದಗಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ನೇಕಾರ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಒಕ್ಕೂಟದ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಘೋಷಣೆ ಮಾಡಿದ್ದನ್ನು ಹೊರತುಪಡಿಸಿದರೆ ಇದುವರೆಗೂ ನಿಗಮದ ಕಾರ್ಯಚಟುವಟಿಕೆಗಳು ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಗಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೂ ನೇಕಾರ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಗಮಕ್ಕೆ ಅಗತ್ಯ ಹಣಕಾಸಿನ ನೆರವು ಒದಗಿಸುವ ಮೂಲಕ ನೇಕಾರರ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ದೇವರ ದಾಸಿಮಯ್ಯ ನೇಕಾರ ಸಮುದಾಯ ಭವನ ನಿರ್ಮಾಣಕ್ಕೆ ಸಿ.ಎ. ನಿವೇಶನ ಮಂಜೂರು ಮಾಡಬೇಕು. ಸಮುದಾಯದ ಸಭೆ, ಸಮಾರಂಭ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಭವನಗಳ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡಬೇಕು. ಅಲ್ಲದೆ, ಸ್ವಂತ ಮನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಬಡ ನೇಕಾರ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕನಿಷ್ಠ ಎರಡು ಎಕರೆ ಜಮೀನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ನೇಕಾರ ಸಮುದಾಯವು ರಾಜಕೀಯ ಕ್ಷೇತ್ರದಲ್ಲಿಯೂ ಸೂಕ್ತ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಮುಂಬರುವ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಹೆಚ್ಚಿನ ಅವಕಾಶ ನೀಡಬೇಕು. ಸ್ಥಳೀಯ ಆಡಳಿತದಲ್ಲಿ ನೇಕಾರ ಸಮುದಾಯದ ಪ್ರತಿನಿಧಿಗಳು ಆಯ್ಕೆಯಾಗುವ ಮೂಲಕ ಸಮುದಾಯದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನೇಕಾರರ ಸಮಸ್ಯೆಗಳಿಗೆ ಕೇವಲ ಭರವಸೆ ನೀಡುವುದರಿಂದ ಪರಿಹಾರ ದೊರೆಯುವುದಿಲ್ಲ. ಸರ್ಕಾರ ಘೋಷಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಸಮುದಾಯದ ಶಿಕ್ಷಣ, ಉದ್ಯೋಗ, ವಸತಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಸಚಿವರು ಮತ್ತು ಶಾಸಕರು ಸರ್ಕಾರದ ಗಮನ ಸೆಳೆದು ನೇಕಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಬಿ.ಎಸ್. ಸೋಮಶೇಖರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸಿ. ಚಂದ್ರಕಾಂತ್ ಬಂಡಾರಿ, ದಯಾನಂದ ಶೆಟ್ಟಿಗಾರ, ಜಿ. ನಾಗರಾಜ ಮಾನ್ವಿ, ಹೊನ್ನಾಲ ವೆಂಕಟೇಶ್, ಪಿ. ಗೋವಿಂದರಾಜ, ದತ್ತಾತ್ರೇಯ ವಲಕಂದಿನ್ನಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



