ರಾಯಚೂರು: ನಗರದ ವಿಜಿ ಕೆ ಹೃದ್ರೋಗ ಆಸ್ಪತ್ರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ರಾಜನಹಳ್ಳಿ ಪೀಠಾಧ್ಯಕ್ಷ ಜಗದ್ಗುರು ಡಾ. ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಭೇಟಿ ನೀಡಿ, ಆಸ್ಪತ್ರೆಯ ವೈದ್ಯರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದರು.
ಆಸ್ಪತ್ರೆಗೆ ಆಗಮಿಸಿದ ಶ್ರೀಗಳು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ವಿ.ಜಿ. ಕುಲಕರ್ಣಿ ಹಾಗೂ ಹೃದ್ರೋಗ ತಜ್ಞ ಡಾ. ಅಜಿತ್ ಕುಲಕರ್ಣಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳು ಹಾಗೂ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಶ್ರೀಗಳು, ಕಳೆದ ಮಾರ್ಚ್ ತಿಂಗಳಲ್ಲಿ ತಮಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಸಂದರ್ಭದಲ್ಲಿ ಡಾ. ಅಜಿತ್ ಕುಲಕರ್ಣಿ ಅವರು ಸೂಕ್ತ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿದರು. ಅಂದು ವೈದ್ಯರು ತೋರಿದ ಕಾಳಜಿ ಹಾಗೂ ನೀಡಿದ ವೈದ್ಯಕೀಯ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದ್ರೋಗ ಚಿಕಿತ್ಸೆಗೆ ಅಗತ್ಯವಿರುವ ಸುಸಜ್ಜಿತ ಆಸ್ಪತ್ರೆಗಳು ಹಾಗೂ ಅನುಭವಿ ತಜ್ಞ ವೈದ್ಯರ ಸೇವೆ ದೊರೆಯುತ್ತಿರುವುದು ಈ ಭಾಗದ ಜನತೆಗೆ ಅನುಕೂಲಕರವಾಗಿದೆ. ವಿಶೇಷವಾಗಿ ರಾಯಚೂರಿನಂತಹ ನಗರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಈ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೃದ್ರೋಗ ತಜ್ಞರಾದ ಡಾ. ಸಗರದ, ಡಾ. ಬಸನಗೌಡ ಪಾಟೀಲ್, ಡಾ. ಬಿ.ಎಂ. ಪಾಟೀಲ್ ಸೇರಿದಂತೆ ಹಲವು ವೈದ್ಯರು ತಮಗೆ ಚಿಕಿತ್ಸೆ ನೀಡಿದ್ದನ್ನು ನೆನಪಿಸಿಕೊಂಡ ಶ್ರೀಗಳು, ವೈದ್ಯರ ಸೇವಾಭಾವ ಹಾಗೂ ರೋಗಿಗಳ ಆರೋಗ್ಯದ ಬಗ್ಗೆ ತೋರುವ ಕಾಳಜಿಯನ್ನು ಮೆಚ್ಚಿದರು.
ವೈದ್ಯಕೀಯ ವೃತ್ತಿಯು ಅತ್ಯಂತ ಜವಾಬ್ದಾರಿಯುತ ಸೇವೆಯಾಗಿದ್ದು, ರೋಗಿಗಳ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಉತ್ತಮ ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವುದು ಕೂಡ ವೈದ್ಯಕೀಯ ಸೇವೆಯ ಪ್ರಮುಖ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜಿ ಕೆ ಹೃದ್ರೋಗ ಆಸ್ಪತ್ರೆಯ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಇನ್ನಷ್ಟು ಉತ್ತಮ ವೈದ್ಯಕೀಯ ಸೇವೆಗಳು ದೊರೆಯಲಿ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ಒದಗಿಸುವಂತಾಗಲಿ ಎಂದು ಹಾರೈಸಿದ ಶ್ರೀಗಳು, ಎಲ್ಲರ ಮೇಲೂ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳ ಆಶೀರ್ವಾದ ಇರಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಡಾ. ಶಾರದಾ ಹುಲಿನಾಯಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪ್ರಭು ಹುಲಿನಾಯಕ, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ಅಮೃತ್ ನಾಯಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯದರ್ಶಿನಿ ನಾಯಕ ಹಾಗೂ ನಿವೃತ್ತ ತಹಶೀಲ್ದಾರ್ ಲಕ್ಷ್ಮಯ್ಯ ಉಪಸ್ಥಿತರಿದ್ದರು.



