ರಾಯಚೂರು: ಮಹರ್ಷಿ ವಾಲ್ಮೀಕಿ ಅವರ ಜೀವನವು ವ್ಯಕ್ತಿತ್ವ ಪರಿವರ್ತನೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಅವರು ರಾಮಾಯಣ ಮಹಾಕಾವ್ಯದ ಮೂಲಕ ಸಾರಿದ ಸತ್ಯ, ಧರ್ಮ, ತ್ಯಾಗ, ನಿಸ್ವಾರ್ಥ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆಲಿಸ್ ಈ. ಜೋಸೆಫ್ ಹೇಳಿದರು.

ನಗರದ ರಾಂಪುರದಲ್ಲಿರುವ ಡಾ. ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಂದಿನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಸಹಯೋಗದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತ ಸಾಹಿತ್ಯದ ಆದಿಕವಿಯಾಗಿದ್ದು, ಜಗತ್ತಿಗೆ ರಾಮಾಯಣದಂತಹ ಮಹಾನ್ ಕಾವ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಜೀವನವು ಮನುಷ್ಯನಲ್ಲಿರುವ ಪರಿವರ್ತನೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ರತ್ನಾಕರನಾಗಿದ್ದ ವ್ಯಕ್ತಿ ನಾರದ ಮಹರ್ಷಿಗಳ ಮಾರ್ಗದರ್ಶನದಿಂದ ಜೀವನದಲ್ಲಿ ಬದಲಾವಣೆ ಕಂಡು, ಕಠಿಣ ತಪಸ್ಸು ಹಾಗೂ ಜ್ಞಾನಾರ್ಜನೆಯ ಮೂಲಕ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ ಎಂದು ವಿವರಿಸಿದರು.

ರಾಮಾಯಣದಲ್ಲಿ ಹಿರಿಯರಿಗೆ ಗೌರವ ನೀಡುವುದು, ಸಚ್ಚಾರಿತ್ರ್ಯ, ಧೈರ್ಯ, ನಾಯಕತ್ವ, ಜವಾಬ್ದಾರಿ, ಪರಸ್ಪರ ಸಹಕಾರ ಹಾಗೂ ನಿಸ್ವಾರ್ಥ ಸೇವೆಯಂತಹ ಅನೇಕ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳ ಕೊರತೆ ಕಂಡುಬರುತ್ತಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ಕುಟುಂಬ, ಶಾಲೆ ಮತ್ತು ಸಮಾಜದ ಮೂಲಕ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ. ವಾಲ್ಮೀಕಿ ಅವರು ಕೇವಲ ಮಹಾಕವಿಯಲ್ಲದೆ, ವ್ಯಕ್ತಿತ್ವ ಪರಿವರ್ತನೆ ಮತ್ತು ಜ್ಞಾನದ ಸಂಕೇತವಾಗಿದ್ದಾರೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ನರಸಿಂಹ ಹೊಸೂರು ಮಾತನಾಡಿ, ಮನುಷ್ಯನು ಕೇವಲ ದೈಹಿಕ ಬೆಳವಣಿಗೆಯಿಂದ ಶ್ರೇಷ್ಠನಾಗುವುದಿಲ್ಲ. ಸಂಸ್ಕಾರ, ಜ್ಞಾನ, ಅರಿವು ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಮಹಾಮಾನವನಾಗಿ ರೂಪುಗೊಳ್ಳಲು ಸಾಧ್ಯ. ಮಹರ್ಷಿ ವಾಲ್ಮೀಕಿ ಅವರ ಜೀವನದಲ್ಲಿ ಸಂಭವಿಸಿದ ಪರಿವರ್ತನೆಯು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಪ್ರತಿಯೊಬ್ಬರೂ ತ್ಯಾಗ, ನಿಸ್ವಾರ್ಥತೆ, ಸಚ್ಚಾರಿತ್ರ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಗುರು ವಂದನಾ, ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜೇಶ್ವರಿ ಸೇರಿದಂತೆ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕಿ ಪರಿಮಳ ಸ್ವಾಗತಿಸಿದರು. ಉಪ ಪ್ರಾಚಾರ್ಯ ಡಾ. ಬಿ. ವಿಜಯ ರಾಜೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ಅಮರಾನಂದ ವಂದಿಸಿದರು.