ರಾಯಚೂರು, ಅ. 26: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಕೇವಲ ಒಂದು ಮಹಾಕಾವ್ಯವಲ್ಲ. ಮಾನವ ಜೀವನದ ಆದರ್ಶಗಳು, ಕರ್ತವ್ಯ, ಧರ್ಮ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿಕೊಡುವ ಜೀವನ ಮೀಮಾಂಸೆಯಾಗಿದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಮಹರ್ಷಿ ವಾಲ್ಮೀಕಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಸಂಸ್ಕೃತ ಸಾಹಿತ್ಯದ ಆದಿಕವಿ ಎನಿಸಿಕೊಂಡಿರುವ ಅವರು ರಚಿಸಿದ ರಾಮಾಯಣ ಮಹಾಕಾವ್ಯವು ಮಾನವ ಸಮಾಜಕ್ಕೆ ಸತ್ಯ, ಧರ್ಮ, ನೀತಿ ಮತ್ತು ಕರ್ತವ್ಯ ಪ್ರಜ್ಞೆಯ ಸಂದೇಶ ನೀಡಿದೆ. ವಾಲ್ಮೀಕಿ ಜಯಂತಿಯು ಭಾರತೀಯ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿಯವರ ಜೀವನವೇ ಮಾನವಕುಲಕ್ಕೆ ಸ್ಫೂರ್ತಿದಾಯಕವಾಗಿದೆ. ಕ್ರೌಂಚ ಪಕ್ಷಿಗಳ ಪ್ರಸಂಗದಿಂದ ಪ್ರೇರಣೆಗೊಂಡು, ನಾರದ ಮುನಿಗಳ ಮಾರ್ಗದರ್ಶನದಲ್ಲಿ ತಪಸ್ಸಿನ ಮೂಲಕ ಮಹರ್ಷಿಯಾಗಿ ರೂಪುಗೊಂಡ ಅವರ ಜೀವನವು ವ್ಯಕ್ತಿಯೊಬ್ಬ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸಾಧನೆಯ ಶಿಖರಕ್ಕೇರಲು ಸಾಧ್ಯ ಎಂಬುದನ್ನು ಸಾರುತ್ತದೆ ಎಂದರು.
ರಾಮಾಯಣ ಮಹಾಕಾವ್ಯದಲ್ಲಿ ಪಿತೃವಾಕ್ಯ ಪರಿಪಾಲನೆ, ಕುಟುಂಬದ ಜವಾಬ್ದಾರಿ, ಸಹಬಾಳ್ವೆ, ನಿಷ್ಠೆ, ಭಕ್ತಿ, ನಂಬಿಕೆ, ಸಹನೆ ಮತ್ತು ತಾಳ್ಮೆಯಂತಹ ಜೀವನ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಮನುಷ್ಯ ತನ್ನ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಎದುರಿಸುವ ಸಂಕಷ್ಟಗಳಿಗೆ ರಾಮಾಯಣ ಮಾರ್ಗದರ್ಶನ ನೀಡುತ್ತದೆ. ಅಹಂಕಾರವು ವ್ಯಕ್ತಿಯ ಅವನತಿಗೆ ಕಾರಣವಾಗುತ್ತದೆ ಎಂಬ ಸಂದೇಶವನ್ನೂ ಈ ಕೃತಿ ನೀಡುತ್ತದೆ ಎಂದು ವಿವರಿಸಿದರು.
ರಾಮಾಯಣದ ಪ್ರಭಾವ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಆಗ್ನೇಯ ಏಷ್ಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಮತ್ತು ಕಲಾ ಪರಂಪರೆಯ ಮೇಲೆಯೂ ಮಹತ್ವದ ಪ್ರಭಾವ ಬೀರಿದೆ. ಇಂತಹ ಮಹಾನ್ ಕೃತಿಯನ್ನು ಜಗತ್ತಿಗೆ ನೀಡಿದ ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ, ಸಾಹಿತ್ಯ ಹಾಗೂ ಚಿಂತನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಮುಂಬರುವ ದಿನಗಳಲ್ಲಿ ಒಂದು ದಿನದ ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವೆ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಡಾ. ಸುಯಮೀಂದ್ರ ಕುಲಕರ್ಣಿ, ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಭಾಸ್ಕರ್ ಉಪಸ್ಥಿತರಿದ್ದರು.
ಉಪಕುಲಸಚಿವ ಡಾ. ವೆಂಕಟೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



