ರಾಯಚೂರು, ಅ. 26: ದಾಸಸಾಹಿತ್ಯವು ಕನ್ನಡ ನಾಡಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಭಕ್ತಿಯ ಸೌರಭದೊಂದಿಗೆ ಜ್ಞಾನದ ಬೆಳಕನ್ನು ಪಸರಿಸುವ ಮಹತ್ವದ ಸಾಹಿತ್ಯವಾಗಿದೆ ಎಂದು ಶ್ರೀ ತಬಲಾ ವಿದ್ಯಾಲಯದ ಸಂಗೀತ ಶಿಕ್ಷಕ ಶ್ರೀಪಾದರಾವ್ ಕುಲಕರ್ಣಿ ಲಕ್ಕಮದಿನ್ನಿ ಹೇಳಿದರು.

ನಗರದ ವಾಸವಿ ನಗರದಲ್ಲಿರುವ ಶ್ರೀ ತಬಲಾ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ದಾಸವಾಣಿ ಹಾಗೂ ವಿದ್ಯಾರ್ಥಿಗಳ ತಬಲಾ ವಾದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಯಚೂರು ಜಿಲ್ಲೆ ಹರಿದಾಸ ಪರಂಪರೆಗೆ ಹೆಸರುವಾಸಿಯಾದ ನೆಲವಾಗಿದೆ. ದಾಸರು ತಮ್ಮ ಕೀರ್ತನೆಗಳು ಹಾಗೂ ಸಾಹಿತ್ಯದ ಮೂಲಕ ಭಕ್ತಿ, ಜ್ಞಾನ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ದಾಸಸಾಹಿತ್ಯವು ಕೇವಲ ಭಕ್ತಿಗೀತೆಗಳಿಗೆ ಸೀಮಿತವಾಗದೆ, ಬದುಕಿಗೆ ಮಾರ್ಗದರ್ಶನ ನೀಡುವ ಸಂದೇಶಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಇಂದಿನ ಯುವಪೀಳಿಗೆಗೆ ದಾಸಸಾಹಿತ್ಯದ ಮಹತ್ವವನ್ನು ಪರಿಚಯಿಸುವುದು ಅಗತ್ಯವಾಗಿದೆ. ಸಂಗೀತದ ಮೂಲಕ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಬಹುದು. ಈ ನಿಟ್ಟಿನಲ್ಲಿ ಶ್ರೀ ತಬಲಾ ವಿದ್ಯಾಲಯವು ಸಂಗೀತ ಶಿಕ್ಷಣದ ಜೊತೆಗೆ ದಾಸಸಾಹಿತ್ಯದ ಪರಿಚಯ ಮಾಡಿಕೊಡುವ ಪ್ರಯತ್ನ ನಡೆಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು ತಬಲಾ ವಾದನ ಪ್ರದರ್ಶಿಸಿ ಗಮನ ಸೆಳೆದರು. ಬಳಿಕ ಕಲಾವಿದರ ತಂಡದಿಂದ ನಡೆದ ದಾಸವಾಣಿ ಕಾರ್ಯಕ್ರಮದಲ್ಲಿ ಹರಿದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಲಾಯಿತು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನು ಶ್ರೀಪಾದರಾವ್ ಕುಲಕರ್ಣಿ ಅಭಿನಂದಿಸಿದರು.

ದಾಸವಾಣಿ ಕಾರ್ಯಕ್ರಮದಲ್ಲಿ ಗಾಯಕರಾದ ಪ್ರಸನ್ನ ಕೀಲಿ, ವೆಂಕಟಲಕ್ಷ್ಮಿ, ತಬಲಾ ವಾದಕರಾದ ಪಾಂಡುರಂಗಾಚಾರ್ಯ ರಾಜಪುರೋಹಿತ್, ಮೃತ್ಯುಂಜಯ ಸ್ವಾಮಿ, ಶ್ರೀಧರ್ ಕುಲಕರ್ಣಿ, ಹಾರ್ಮೋನಿಯಂ ವಾದಕರಾಗಿ ಶ್ರೀಪಾದರಾವ್ ಕುಲಕರ್ಣಿ ಹಾಗೂ ತಾಳವಾದನದಲ್ಲಿ ರವಿ ಕುಲಕರ್ಣಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಕಾಶ್, ಪ್ರಶಾಂತ್, ರಮಕಾಂತ್, ರಾಘವೇಂದ್ರ, ಗೋಪಾಲ್ ಹಾಗೂ ಶ್ರೀ ತಬಲಾ ವಿದ್ಯಾಲಯದ ವಿದ್ಯಾರ್ಥಿಗಳಾದ ಚನ್ನವೀರಯ್ಯ ವಸ್ತ್ರದ್, ಶ್ರೀನಿಕೇತನ್ ಭಟ್, ಸಂಜೀತ್ ಗೋನಾಳ್, ಜೀತೇಂದ್ರ ದೇಸಾಯಿ, ವೈಭವಿ, ನರಸಿಂಹ ರಾಯ್ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.