ರಾಯಚೂರು, ಅ. 26: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ವಿಶ್ವದಾದ್ಯಂತ ಗೌರವ ಪಡೆದಿರುವ ಶ್ರೇಷ್ಠ ಮಹಾಕಾವ್ಯವಾಗಿದ್ದು, ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎನ್. ಶಂಕ್ರಪ್ಪ ವಕೀಲರು ಹೇಳಿದರು.
ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಮಾಯಣವು ಕೇವಲ ಧಾರ್ಮಿಕ ಕಥನಕ್ಕೆ ಸೀಮಿತವಾಗಿಲ್ಲ. ಮನುಷ್ಯನ ಜೀವನದಲ್ಲಿ ಸತ್ಯ, ಧರ್ಮ, ತ್ಯಾಗ, ಕರ್ತವ್ಯನಿಷ್ಠೆ ಹಾಗೂ ಕೌಟುಂಬಿಕ ಸಂಬಂಧಗಳಿಗೆ ಇರುವ ಮಹತ್ವವನ್ನು ತಿಳಿಸಿಕೊಡುವ ಅಮೂಲ್ಯ ಕೃತಿಯಾಗಿದೆ. ಶ್ರೀರಾಮನ ಆದರ್ಶ ಜೀವನದ ಮೂಲಕ ಸಮಾಜಕ್ಕೆ ಉತ್ತಮ ನಡವಳಿಕೆ ಮತ್ತು ಮಾನವೀಯತೆಯ ಸಂದೇಶವನ್ನು ಮಹರ್ಷಿ ವಾಲ್ಮೀಕಿ ನೀಡಿದ್ದಾರೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿಯವರ ಸಾಹಿತ್ಯವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಅವರ ಚಿಂತನೆಗಳು ಇಂದಿನ ಯುವಪೀಳಿಗೆಗೂ ಮಾರ್ಗದರ್ಶನ ನೀಡುವಂತಿದ್ದು, ಪ್ರತಿಯೊಬ್ಬರೂ ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಪಲುಗುಲ ನಾಗರಾಜ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಜಾತಿ, ಮತಗಳ ಗಡಿಯನ್ನು ಮೀರಿ ಇಡೀ ಮಾನವಕುಲಕ್ಕೆ ಆದರ್ಶಪ್ರಾಯರಾದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ, ಗೌತಮ ಬುದ್ಧ, ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆಗಳನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವ ಬದಲು, ಸಮಾನತೆ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಸಂತೋಷ ರಾಜಗುರು, ಜಂಬಣ್ಣ ನಿಲೋಗಲ್, ಕಡಗೋಲು ಆಂಜನೇಯ, ವೈ. ಗೋಪಾಲ ರೆಡ್ಡಿ, ವೀರೇಶ ನಾಯಕ, ನರಸಿಂಹ, ಮಂಚಾಲ ಭೀಮಣ್ಣ, ದೊರಬಾಬು, ಜೆ.ಎಂ. ಮೌನೇಶ, ಪ್ರದೀಪ ಸಾನಬಾಳ, ಎನ್. ವಿನಾಯಕ ರಾವ್, ನರೇಂದ್ರ ನಾಯಕ, ವಿ. ಗೋವಿಂದ, ಅಶ್ವಿನಿ, ಚಂದ್ರಾವತಿ, ನಿವೇದಿತಾ, ರಾಧಾ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



