ರಾಯಚೂರು: ನಗರದ ವಿ.ಜೆ. ಇಂಟರ್‌ನ್ಯಾಷನಲ್ಸ್ ಪ್ರೊಡಕ್ಷನ್ ವತಿಯಿಂದ ಅಕ್ಟೋಬರ್ 25ರಂದು ರಾಯಚೂರು ವಿಜಯೋತ್ಸವ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿ.ಜೆ. ಇಂಟರ್‌ನ್ಯಾಷನಲ್ಸ್ ಪ್ರೊಡಕ್ಷನ್ ಮುಖ್ಯಸ್ಥ ಡಾ. ವೀರೇಂದ್ರ ಜಲ್ದಾರ್ ಅವರು ವಿದ್ಯಾರ್ಥಿಗಳಿಗೆ ‘ನೆವರ್ ಗಿವ್ ಅಪ್’ (ಎಂದಿಗೂ ಸೋಲೊಪ್ಪಿಕೊಳ್ಳಬೇಡಿ) ಎಂಬ ವಿಷಯದ ಕುರಿತು ಸ್ವಯಂ ಪ್ರೇರಣೆಯ ವಿಶೇಷ ತರಗತಿ ನಡೆಸಿ ಮಾತನಾಡಿದರು.

ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಸೋಲುಗಳಿಗೆ ಹೆದರದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರ ಪ್ರಯತ್ನದ ಮೂಲಕ ಗುರಿ ಸಾಧಿಸಬೇಕು ಎಂದು ಪ್ರೇರೇಪಿಸಿದರು.

ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ‘ನೆವರ್ ಗಿವ್ ಅಪ್’, ‘ಡ್ಯಾನ್ಸ್ ಟು ಫಿಟ್ನೆಸ್’ ಹಾಗೂ ‘ಫಿಸಿಕಲಿ ಫಿಟ್ ಆ್ಯಂಡ್ ಮೆಂಟಲಿ ಸ್ಟ್ರಾಂಗ್’ ಎಂಬ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಸದೃಢತೆಗೂ ಆದ್ಯತೆ ನೀಡಬೇಕು. ನೃತ್ಯ, ಸಂಗೀತ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಚುರುಕುತನದೊಂದಿಗೆ ಮನಸ್ಸಿನ ಉಲ್ಲಾಸವನ್ನೂ ಕಾಪಾಡಿಕೊಳ್ಳಬಹುದು ಎಂದು ಡಾ. ವೀರೇಂದ್ರ ಜಲ್ದಾರ್ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ಹಾಡುಗಳನ್ನು ಹಾಡಿ, ನೃತ್ಯದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಸಂಭ್ರಮದ ಮೆರುಗು ನೀಡಲಾಯಿತು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮವು ಸರಳವಾಗಿ ಮುಕ್ತಾಯಗೊಂಡಿತು.