ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ತತ್ವಪದ ಸಾಹಿತ್ಯದ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ‘ತತ್ವಪದ ಸಾಹಿತ್ಯ ಅಧ್ಯಯನ ಪೀಠ’ವನ್ನು ಸ್ಥಾಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕ ಒತ್ತಾಯಿಸಿದೆ.

ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ನೇತೃತ್ವದ ನಿಯೋಗವು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿ, ತತ್ವಪದ ಸಾಹಿತ್ಯದ ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿತು.

ರಾಯಚೂರು ಜಿಲ್ಲೆ ಶರಣರು, ಹರಿದಾಸರು, ತತ್ವಪದಕಾರರು ಹಾಗೂ ಸೂಫಿ ಸಂತರ ಸಮೃದ್ಧ ಪರಂಪರೆಯನ್ನು ಹೊಂದಿರುವ ನೆಲವಾಗಿದೆ. ಈ ಭಾಗದಲ್ಲಿ ರೂಪುಗೊಂಡ ತತ್ವಪದ ಸಾಹಿತ್ಯವು ಶರಣರ ವಚನಗಳು ಹಾಗೂ ಹರಿದಾಸರ ಕೀರ್ತನೆಗಳಿಗಿಂತ ವಿಭಿನ್ನವಾದ ವೈಚಾರಿಕತೆ ಮತ್ತು ಅಭಿವ್ಯಕ್ತಿ ಶೈಲಿಯನ್ನು ಹೊಂದಿದೆ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಜನಪದ ಭಾಷೆ, ಒಗಟುಗಳು ಹಾಗೂ ರೂಪಕಗಳ ಮೂಲಕ ಜೀವನದ ಸತ್ಯಗಳನ್ನು ತಿಳಿಸುವ ವಿಶಿಷ್ಟ ಸಾಹಿತ್ಯ ಪ್ರಕಾರ ಇದಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತತ್ವಪದಕಾರರು ತಮ್ಮ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆಗಳು, ಅಂಧಶ್ರದ್ಧೆ, ಅಸಮಾನತೆ ಹಾಗೂ ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಶ್ರಮಿಸಿದ್ದಾರೆ. ಮಾನವೀಯ ಮೌಲ್ಯಗಳು, ಧಾರ್ಮಿಕ ಸಹಿಷ್ಣುತೆ, ಕೋಮು ಸೌಹಾರ್ದತೆ, ಸಾಮಾಜಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ಸಮನ್ವಯತೆಯ ಸಂದೇಶಗಳನ್ನು ತಮ್ಮ ರಚನೆಗಳ ಮೂಲಕ ಪರಿಣಾಮಕಾರಿಯಾಗಿ ಸಾರಿದ್ದಾರೆ ಎಂದು ಪರಿಷತ್ತು ತಿಳಿಸಿದೆ.

ತತ್ವಪದ ಸಾಹಿತ್ಯವು ಕೇವಲ ಆಧ್ಯಾತ್ಮಿಕ ಚಿಂತನೆಗೆ ಸೀಮಿತವಾಗದೆ, ಸಮಾಜ ಸುಧಾರಣೆ ಹಾಗೂ ಮಾನವೀಯ ಸಂಬಂಧಗಳ ಬಲವರ್ಧನೆಗೂ ಮಹತ್ವದ ಕೊಡುಗೆ ನೀಡಿದೆ. ಇಂತಹ ಅಪರೂಪದ ಸಾಹಿತ್ಯ ಪರಂಪರೆಯ ಕುರಿತು ಸಮಗ್ರ ಅಧ್ಯಯನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅಭಿಪ್ರಾಯಪಟ್ಟಿದ್ದಾರೆ.

ತತ್ವಪದಕಾರರ ಜೀವನ ಚರಿತ್ರೆ, ಅವರ ಸಾಹಿತ್ಯದಲ್ಲಿನ ಸಾಮಾಜಿಕ ಚಿಂತನೆ, ಜನಪದ ಸಂಸ್ಕೃತಿಯ ಪ್ರಭಾವ ಹಾಗೂ ತಾತ್ವಿಕ ಸಂದೇಶಗಳ ಕುರಿತು ವ್ಯವಸ್ಥಿತ ಸಂಶೋಧನೆ ನಡೆಯಬೇಕಿದೆ. ವಿವಿಧೆಡೆ ಚದುರಿಹೋಗಿರುವ ತತ್ವಪದಗಳ ಸಂಗ್ರಹ, ದಾಖಲಾತಿ, ಪ್ರಕಟಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೂ ವಿಶ್ವವಿದ್ಯಾಲಯ ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.

ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಅಧ್ಯಯನ ಪೀಠ ಸ್ಥಾಪನೆಯಾದರೆ ಸಂಶೋಧನಾ ವಿದ್ಯಾರ್ಥಿಗಳು, ಸಾಹಿತಿಗಳು ಹಾಗೂ ಅಧ್ಯಯನಾಸಕ್ತರಿಗೆ ಅನುಕೂಲವಾಗುವುದರ ಜೊತೆಗೆ ಕಲ್ಯಾಣ ಕರ್ನಾಟಕದ ವಿಶಿಷ್ಟ ಸಾಹಿತ್ಯ ಪರಂಪರೆಗೆ ಶೈಕ್ಷಣಿಕ ಮನ್ನಣೆ ದೊರೆಯಲಿದೆ. ಆದ್ದರಿಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ ಹಾಗೂ ಭೀಮನಗೌಡ ಪಾಟೀಲ್ ಇಟಗಿ ಉಪಸ್ಥಿತರಿದ್ದರು.