ರಾಯಚೂರು: ಹನ್ನೆರಡನೇ ಶತಮಾನದ ಶಿವಶರಣರು ಪ್ರತಿಪಾದಿಸಿದ ಕಾಯಕ, ಭಕ್ತಿ, ದಾಸೋಹ ಮತ್ತು ಸೇವಾ ಮನೋಭಾವದಂತಹ ಜೀವನ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ನಗರದ ಎಲ್ವಿಡಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅರುಣಾ ಹಿರೇಮಠ ಹೇಳಿದರು.
ನಗರದ ಎನ್ಜಿಒ ಕಾಲೋನಿಯ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಶೀಗಿ ಹುಣ್ಣಿಮೆ ಅಂಗವಾಗಿ ಸೋಮವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 'ಜ್ಞಾನದಾಸೋಹ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 'ಶರಣರ ಜೀವನ ದರ್ಶನ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹನ್ನೆರಡನೇ ಶತಮಾನದ ಶರಣರು ಸಮಾಜಕ್ಕೆ ನೀಡಿದ ಸಂದೇಶಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗಿರದೆ, ಮಾನವೀಯತೆ, ಸಮಾನತೆ, ನೈತಿಕತೆ ಹಾಗೂ ಉತ್ತಮ ಜೀವನ ನಡೆಸುವ ಮಾರ್ಗವನ್ನು ತಿಳಿಸುತ್ತವೆ. ಶರಣರ ನಡೆನುಡಿಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಅವರ ಚಿಂತನೆಗಳನ್ನು ಮನೆಯಿಂದ ಸಮಾಜದವರೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಬಸವಣ್ಣನವರ 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ' ಎಂಬ ವಚನವು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮಹತ್ವವನ್ನು ಸಾರುತ್ತದೆ. ಇಂತಹ ವಚನಗಳನ್ನು ಕೇವಲ ಪಠಿಸುವುದಕ್ಕಿಂತ ಅವುಗಳ ಆಶಯವನ್ನು ಜೀವನದಲ್ಲಿ ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಿವಶರಣರು ಆಡಂಬರವಿಲ್ಲದ ಸರಳ ಜೀವನ ನಡೆಸಿ ಸತ್ಯ, ಪ್ರಾಮಾಣಿಕತೆ ಮತ್ತು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಹಿಳೆಯರಿಗೂ ಆತ್ಮಗೌರವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಜ್ಞಾನಾರ್ಜನೆಗೆ ಅವಕಾಶ ಒದಗಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶರಣರು ಮಹತ್ವದ ಕೊಡುಗೆ ನೀಡಿದರು ಎಂದು ವಿವರಿಸಿದರು.
ಅಂದಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಶರಣರು ಸ್ತ್ರೀ–ಪುರುಷ ಸಮಾನತೆ, ಮಾನವೀಯತೆ ಹಾಗೂ ನೈತಿಕ ಬದುಕಿನ ಮಹತ್ವವನ್ನು ಪ್ರತಿಪಾದಿಸಿದ್ದರು. ತಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಮಾಜಕ್ಕೆ ಹೊಸ ಚಿಂತನೆಗಳನ್ನು ನೀಡಿದ್ದರು ಎಂದು ತಿಳಿಸಿದರು.
ಶರಣರು ಲೋಕಕಲ್ಯಾಣಕ್ಕಾಗಿ ಅಂತರಂಗದ ಭಕ್ತಿ, ಕಾಯಕವೇ ಕೈಲಾಸ, ದಾಸೋಹ ಭಾವ, ಸದಾಚಾರ ಹಾಗೂ ಇಷ್ಟಲಿಂಗ ಪೂಜೆಯಂತಹ ತತ್ವಗಳನ್ನು ಬೋಧಿಸಿದ್ದಾರೆ. ಅಹಂಕಾರವನ್ನು ತೊರೆದು ವಿನಮ್ರತೆಯಿಂದ ಕಾಯಕದಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ಶಿವಪೂಜೆ ಎಂಬ ಸಂದೇಶವನ್ನು ನೀಡಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಅಹಂಕಾರದಿಂದಲ್ಲ, ಸಮಾಧಾನ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.
ಅಲ್ಲಮಪ್ರಭು ಸೇರಿದಂತೆ ಅನೇಕ ಶಿವಶರಣರು ತಮ್ಮ ವಚನಗಳ ಮೂಲಕ ಜ್ಞಾನದ ಮಹತ್ವವನ್ನು ಸಾರಿದ್ದಾರೆ. ಸಮಾಜದಲ್ಲಿ ಅರಿವು ಮೂಡಿಸುವುದು, ಅಜ್ಞಾನವನ್ನು ದೂರ ಮಾಡುವುದು ಹಾಗೂ ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಶರಣರ ಚಿಂತನೆಯ ಪ್ರಮುಖ ಆಶಯವಾಗಿದೆ ಎಂದು ಡಾ. ಅರುಣಾ ಹಿರೇಮಠ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ನೀಲಕಂಠೇಶ್ವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಮಹಾಂತೇಶ ಚಾಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೂರ್ಣಿಮಾ ಚಂದ್ರಶೇಖರ್ ಮಟಮಾರಿ ಉಪಸ್ಥಿತರಿದ್ದರು. ಉಪನ್ಯಾಸ ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ ಪಡಶೆಟ್ಟಿ, ಪ್ರಭನಗೌಡ ಹಂಚಿನಾಳ, ಶಂಕರಗೌಡ, ಡಾ. ಬಿ. ವಿಜಯ ರಾಜೇಂದ್ರ, ಬಸವರಾಜ ಪ್ರೇರಣಾ, ಶಿವಶಂಕರ್, ವೀರಭದ್ರಯ್ಯ ಗಾಣದಾಳ ಮಠ, ನೀಲಕಂಠ, ಸೂಗೂರೇಶ್ವರ ಸಾಲಿಮಠ ಸೇರಿದಂತೆ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು, ಬಡಾವಣೆಯ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



