ರಾಯಚೂರು: ನಗರದ ಮಂತ್ರಾಲಯ ರಸ್ತೆಯಲ್ಲಿರುವ ಶ್ರೀ ಸದ್ಗುರು ಸತ್ಯಾತ್ಮ ಶಿವಲಿಂಗೇಶ್ವರ ಮಠದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಅಭಿವೃದ್ಧಿ ಕಲಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಸುಗಮ ಸಂಗೀತ ಮತ್ತು ತತ್ವಪದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶ್ರೀ ಸದ್ಗುರು ಸತ್ಯಾತ್ಮ ಶಿವಲಿಂಗೇಶ್ವರ ಮಠದ ಪೂಜ್ಯ ಶ್ರೀ ನರಸಣ್ಣ ತಾತನವರು ತಬಲಾ ವಾದನ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಣ್ಣಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಭೀಮಣ್ಣ, ಕನ್ನಡ ಸಂಘದ ಉಪಾಧ್ಯಕ್ಷ ಶಿವನಗೌಡ ಹಾಗೂ ಕಾರ್ಯದರ್ಶಿ ಮಹಾದೇವಪ್ಪ ಭಾಗವಹಿಸಿದ್ದರು.
ಹಿರಿಯ ಕಲಾವಿದ ಜಿಂದಪ್ಪ ಅಸ್ಕಿಹಾಳ ಅವರು ತಮ್ಮ ಸುಮಧುರ ಕಂಠದಿಂದ ಜನಪದ ಗೀತೆಗಳು, ತತ್ವಪದಗಳು, ವಚನಗಳು ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ನೆರೆದಿದ್ದ ಸಂಗೀತಪ್ರಿಯರನ್ನು ರಂಜಿಸಿದರು. ಅವರ ಗಾಯನವು ಶ್ರೀಮಠದ ಆವರಣದಲ್ಲಿ ಭಕ್ತಿ ಮತ್ತು ಸಂಗೀತದ ವಾತಾವರಣವನ್ನು ಮೂಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮತ್ತೋರ್ವ ಕಲಾವಿದ ನೀಲಕಂಠ ಅವರು ತತ್ವಪದ ಸಂಗೀತ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಇಬ್ಬರೂ ಕಲಾವಿದರ ಗಾಯನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ಕಾರ್ಯಕ್ರಮಕ್ಕೆ ವಾದ್ಯ ಸಹಕಾರಿಗಳಾಗಿ ಎ.ಎಸ್. ರಘುಕುಮಾರ ಹಾಗೂ ನರಸಿಂಹಲು ಅರೋಲಿ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು, ಕಲಾವಿದರು, ಕಲಾಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸಿದರು.



