ರಾಯಚೂರು, ಅ. 27: ಎರಡು ವಾರಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಮ್ಮು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ಕ್ಷಯರೋಗ ಪರೀಕ್ಷೆಗೆ ಒಳಗಾಗಬೇಕು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಹಚ್ಚಿ ನಿಗದಿತ ಅವಧಿಯ ಚಿಕಿತ್ಸೆ ಪಡೆದರೆ ಕ್ಷಯರೋಗದಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ನಗರದ ಸಿಯಾ ತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ಟೋಬರ್ 27ರಿಂದ ಡಿಸೆಂಬರ್ 8ರವರೆಗೆ ವಿಶೇಷ ಕ್ಷಯರೋಗ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ ಕ್ಷೇತ್ರಮಟ್ಟದ ವೈದ್ಯಕೀಯ ಸಿಬ್ಬಂದಿ ತಂಡಗಳು ಮನೆಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳಿರುವವರನ್ನು ಗುರುತಿಸಲಿವೆ. ಅಗತ್ಯವಿರುವವರಿಗೆ ಕಫ ಪರೀಕ್ಷೆ ಸೇರಿದಂತೆ ಸೂಕ್ತ ತಪಾಸಣೆ ನಡೆಸಿ, ರೋಗ ದೃಢಪಟ್ಟವರಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದು ವಿವರಿಸಿದರು.
ಕ್ಷಯರೋಗವು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮುಖ್ಯವಾಗಿ ಶ್ವಾಸಕೋಶದ ಕ್ಷಯರೋಗ ಹೊಂದಿರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಗೆ ಬಿಡುಗಡೆಯಾಗುವ ಸೂಕ್ಷ್ಮ ಸೋಂಕುಕಾರಕ ಕಣಗಳ ಮೂಲಕ ಇತರರಿಗೆ ಹರಡುವ ಸಾಧ್ಯತೆಯಿದೆ. ವಿಶೇಷವಾಗಿ ಕುಟುಂಬದ ಸದಸ್ಯರು ಹಾಗೂ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿರುವವರಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ರೋಗಲಕ್ಷಣಗಳು ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಂಡು, ಕ್ಷಯರೋಗ ದೃಢಪಟ್ಟಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಗೆ ಉಚಿತ ಸೌಲಭ್ಯಗಳಿದ್ದು, ಸಾಮಾನ್ಯವಾಗಿ ಆರು ತಿಂಗಳ ಚಿಕಿತ್ಸೆಯಿಂದ ಔಷಧಿಗಳಿಗೆ ಸ್ಪಂದಿಸುವ ಕ್ಷಯರೋಗವನ್ನು ಗುಣಪಡಿಸಬಹುದು. ಆದರೆ ಮಧ್ಯದಲ್ಲಿಯೇ ಔಷಧ ಸೇವನೆ ನಿಲ್ಲಿಸುವುದರಿಂದ ರೋಗ ಮರುಕಳಿಸುವ ಅಥವಾ ಔಷಧ ನಿರೋಧಕ ಕ್ಷಯರೋಗ ಉಂಟಾಗುವ ಅಪಾಯವಿದೆ. ಹೀಗಾಗಿ ವೈದ್ಯರು ಸೂಚಿಸಿದ ಅವಧಿಯವರೆಗೆ ನಿಯಮಿತವಾಗಿ ಔಷಧ ಸೇವಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಎರಡು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರಿಯುವುದು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ವಿಶೇಷವಾಗಿ ಸಂಜೆ ವೇಳೆಯಲ್ಲಿ ಜ್ವರ ಬರುವುದು, ರಾತ್ರಿ ವೇಳೆ ಅತಿಯಾಗಿ ಬೆವರುವುದು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುವುದು, ಹಸಿವು ಕುಂಠಿತಗೊಳ್ಳುವುದು, ನಿರಂತರ ಆಯಾಸ, ದೌರ್ಬಲ್ಯ ಹಾಗೂ ಎದೆನೋವು ಕ್ಷಯರೋಗದ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಯಶೋಧಾ ಮಾತನಾಡಿ, ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರೋಗದ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಸೋಂಕಿನ ಅಪಾಯ ಹೆಚ್ಚಿರುವ ವ್ಯಕ್ತಿಗಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸುವುದರಿಂದ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ಷಯರೋಗಿಗಳ ಕುಟುಂಬದ ಸದಸ್ಯರು, ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರು, ಎಚ್ಐವಿ ಸೋಂಕಿತರು, ಮಧುಮೇಹಿಗಳು, ಧೂಮಪಾನಿಗಳು, ತಂಬಾಕು ಸೇವಿಸುವವರು, ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಹಾಗೂ ಕಡಿಮೆ ದೇಹತೂಕ ಹೊಂದಿರುವವರು ಕ್ಷಯರೋಗದ ಅಪಾಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಅದೇ ರೀತಿ ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಸಿಕೊಂಡವರು, ದೀರ್ಘಕಾಲ ಸ್ಟೀರಾಯ್ಡ್ ಔಷಧ ಬಳಸುವವರು, ರೋಗನಿರೋಧಕ ಶಕ್ತಿ ಕಡಿಮೆಯಿರುವವರು, ವಯೋವೃದ್ಧರು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಡ ವಿಶೇಷ ಗಮನ ಹರಿಸಬೇಕಾದ ಗುಂಪುಗಳಾಗಿವೆ. ಜೈಲುಗಳು, ಆಶ್ರಮಗಳು ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ವಾಸಿಸುವವರು, ಕ್ಷಯರೋಗಿಗಳ ಸಂಪರ್ಕಕ್ಕೆ ಬರುವ ಆರೋಗ್ಯ ಸಿಬ್ಬಂದಿ, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವವರು ಹಾಗೂ ಧೂಳುಪೂರಿತ ವಾತಾವರಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆಯಂತೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿವರಿಸಿದರು.
ಕ್ಷಯರೋಗದ ಬಗ್ಗೆ ಅನಗತ್ಯ ಭಯ ಅಥವಾ ಸಾಮಾಜಿಕ ಕಳಂಕ ಹೊಂದದೆ, ರೋಗಲಕ್ಷಣಗಳಿರುವವರು ಮುಕ್ತವಾಗಿ ಆರೋಗ್ಯ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ಮನೆಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಸಾರ್ವಜನಿಕರು ಸಹಕರಿಸಿ ಅಗತ್ಯ ಮಾಹಿತಿ ನೀಡಬೇಕು. ರೋಗವನ್ನು ಆರಂಭದಲ್ಲಿಯೇ ಗುರುತಿಸುವುದರಿಂದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸುವುದರ ಜೊತೆಗೆ ಕುಟುಂಬದ ಇತರ ಸದಸ್ಯರ ಆರೋಗ್ಯವನ್ನೂ ರಕ್ಷಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ್, ವೈದ್ಯಾಧಿಕಾರಿ ಗುಂಡಮ್ಮ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಪುಂಡಲೀಕ ಗಂಜಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ., ಡಿಪಿಸಿ ಅಮರೇಶ್ ಕುಮಾರ್, ಪಿಪಿಎಂ ಮೋಹಿನ್ ಪಾಷಾ, ಡಿಪಿಎಸ್ ಪ್ರವೀಣಕುಮಾರ್, ಎಸ್ಟಿಎಸ್ ಅಮೀರ್, ಟಿಬಿಎಚ್ಪಿ ಯೂಸುಫ್ ಉದ್ದೀನ್, ಪ್ರದೀಪ್ ಕುಮಾರ್, ಎಸ್ಟಿಎಲ್ಎಸ್ ಅಬ್ದುಲ್ ನಬಿಸಾಬ್, ಫಾರ್ಮಸಿ ಅಧಿಕಾರಿ ಸೋಮಶೇಖರ್, ಎಲ್ಟಿಓ ರಮೇಶ್, ಎಂಟಿಎಸ್ ಸಂಧ್ಯಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಅನಿತಾ, ಮೈನು ಬೇಗಂ, ರೇಣುಕಾ, ರೇಣುಕಾ ಡಿ., ಸುನೀತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಿಶಾಂತ್, ಬಸವರಾಜ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



