ರಾಯಚೂರು: ನಗರದ ಎಲ್‌ಬಿಎಸ್ ನಗರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಆರ್ಯವೈಶ್ಯ ಸಮಾಜದ ಯುವ ವ್ಯಾಪಾರಿ ಬಾಪೂರು ನರಸಿಂಹ ಅವರ ಸಾವಿಗೆ ಸಂತಾಪ ಸೂಚಿಸಿ, ಆರ್ಯವೈಶ್ಯ ಸಮಾಜದ ವತಿಯಿಂದ ನಗರದ ನಗರೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿ, ನೊಂದ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಆರ್ಯವೈಶ್ಯ ಸಮಾಜದ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ, ಬಾಪೂರು ನರಸಿಂಹ ಅವರ ಹತ್ಯೆ ಅತ್ಯಂತ ಖಂಡನೀಯವಾಗಿದ್ದು, ಈ ಘಟನೆಯಿಂದ ಇಡೀ ಸಮಾಜಕ್ಕೆ ನೋವುಂಟಾಗಿದೆ. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವುದರಿಂದ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನರಸಿಂಹ ಅವರ ಕುಟುಂಬ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ದುಃಖದ ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಧೈರ್ಯ ಕಳೆದುಕೊಳ್ಳದೆ ಜೀವನವನ್ನು ಮುನ್ನಡೆಸಬೇಕು. ಅವರೊಂದಿಗೆ ಇಡೀ ಆರ್ಯವೈಶ್ಯ ಸಮಾಜವಿದ್ದು, ಅಗತ್ಯವಿರುವ ಎಲ್ಲ ರೀತಿಯ ನೆರವು ಮತ್ತು ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಮಾಜದ ಹಿರಿಯ ಮುಖಂಡ ಜಗದೀಶ್ ಗುಪ್ತ ಮಾತನಾಡಿ, ನರಸಿಂಹ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವವರೆಗೂ ಸಮಾಜದ ಹೋರಾಟ ಮುಂದುವರಿಯಲಿದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರ್ಯವೈಶ್ಯ ಸಮಾಜದ ಒಗ್ಗಟ್ಟು ಹಾಗೂ ನಿರಂತರ ಒತ್ತಾಯದಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯ ಬಂಧನದಿಂದ ಮಾತ್ರ ಕುಟುಂಬಕ್ಕೆ ಸಂಪೂರ್ಣ ನ್ಯಾಯ ದೊರೆತಂತಾಗುವುದಿಲ್ಲ. ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವವರೆಗೂ ಸಮಾಜವು ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ನರಸಿಂಹ ಅವರ ಹತ್ಯೆಯ ನಂತರ ನೊಂದ ಕುಟುಂಬಕ್ಕೆ ವಿವಿಧೆಡೆಯಿಂದ ಸಮಾಜದ ಬಾಂಧವರು ಸಹಾಯಹಸ್ತ ಚಾಚುತ್ತಿರುವುದು ಮಾನವೀಯತೆಯ ಪ್ರತೀಕವಾಗಿದೆ. ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಅವರ ಮಕ್ಕಳ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮೃತ ಬಾಪೂರು ನರಸಿಂಹ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಭೆಯಲ್ಲಿ ಜಟಂ ಶ್ರೀನಿವಾಸ, ಕೆ.ಸಿ. ವೀರೇಶ್, ಭೀಮಶಂಕರ ಸೇರಿದಂತೆ ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.