ರಾಯಚೂರು, ಅ.31: ಬೆಂಗಳೂರು ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಹಣ, ಜಾತಿ ಮತ್ತು ರಾಜಕೀಯ ಪ್ರಭಾವಕ್ಕೆ ಅವಕಾಶ ನೀಡದೆ, ಅರ್ಹತೆ, ಪ್ರಾಮಾಣಿಕತೆ ಹಾಗೂ ರೈತಪರ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷಿ ವಿಶ್ವವಿದ್ಯಾನಿಲಯಗಳು ರಾಜ್ಯದ ಕೃಷಿ ಅಭಿವೃದ್ಧಿ, ಆಹಾರ ಭದ್ರತೆ ಮತ್ತು ಸಂಶೋಧನೆಯ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ರಾಜಕೀಯ ಹಸ್ತಕ್ಷೇಪದ ಆತಂಕಗಳು ವಿಶ್ವವಿದ್ಯಾನಿಲಯಗಳ ಘನತೆಗೆ ಧಕ್ಕೆ ತರುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕುಲಪತಿಗಳ ಆಯ್ಕೆಗೆ ರಚಿಸಿರುವ ಶೋಧನಾ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಅಭ್ಯರ್ಥಿಗಳೊಂದಿಗೆ ಹೊಂದಿರುವ ಸಂಬಂಧಗಳನ್ನು ಪರಿಶೀಲಿಸಬೇಕು. ಹಿತಾಸಕ್ತಿ ಸಂಘರ್ಷ ಇಲ್ಲದಿರುವ ಕುರಿತು ಲಿಖಿತ ಘೋಷಣೆ ಪಡೆಯಬೇಕು. ಆಯ್ಕೆ ಮಾನದಂಡಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಸಂಶೋಧನಾ ಸಾಧನೆ, ಆಡಳಿತಾತ್ಮಕ ಸಾಮರ್ಥ್ಯ, ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ರೈತಪರ ದೃಷ್ಟಿಕೋನಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನೇಮಕಾತಿಯಲ್ಲಿ ಹಣದ ಪ್ರಭಾವ ಅಥವಾ ಅಕ್ರಮ ವ್ಯವಹಾರಗಳ ಅನುಮಾನಗಳಿದ್ದಲ್ಲಿ ಅಭ್ಯರ್ಥಿಗಳ ಆಸ್ತಿ, ಆದಾಯದ ಮೂಲಗಳು ಹಾಗೂ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ಸ್ವತಂತ್ರ ಹಣಕಾಸು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನಿರ್ಗಮಿಸುತ್ತಿರುವ ಕುಲಪತಿಗಳ ಅಧಿಕಾರಾವಧಿಯಲ್ಲಿ ನಡೆದ ನೇಮಕಾತಿ, ವರ್ಗಾವಣೆ, ಟೆಂಡರ್, ಖರೀದಿ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಅಕ್ರಮಗಳ ಕುರಿತು ದೂರುಗಳಿದ್ದರೆ ಸ್ವತಂತ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಕುಲಪತಿಗಳ ಆಯ್ಕೆ ಕೇವಲ ಆಡಳಿತಾತ್ಮಕ ನೇಮಕಾತಿಯಲ್ಲ, ಅದು ರೈತರ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಜವಾಬ್ದಾರಿಯಾಗಿದೆ. ರಾಜ್ಯಪಾಲರು ಕುಲಾಧಿಪತಿಗಳ ಅಧಿಕಾರದ ವ್ಯಾಪ್ತಿಯಲ್ಲಿ ಮಧ್ಯಪ್ರವೇಶಿಸಿ, ಎರಡೂ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಖಾತರಿಪಡಿಸಬೇಕು ಎಂದು ಚಾಮರಸ ಮಾಲಿಪಾಟೀಲ ಒತ್ತಾಯಿಸಿದ್ದಾರೆ.



