ರಾಯಚೂರು, ಅ.31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಭಾರತದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಉಭಯ ನಾಯಕರ ಭಾವಚಿತ್ರಗಳಿಗೆ ಪುಷ್ಪಮಾಲೆ ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ದೇಶದ ನಿರ್ಮಾಣದಲ್ಲಿ ಇಬ್ಬರು ನಾಯಕರ ಕೊಡುಗೆಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ಹಿರಿಯ ಸದಸ್ಯ ಜಯಣ್ಣ, ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಇಂದಿರಾ ಗಾಂಧಿ ಅವರು ತಮ್ಮ ದಿಟ್ಟ ಆಡಳಿತ, ದೂರದೃಷ್ಟಿಯ ನಿರ್ಧಾರಗಳು ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸವಾಲಿನ ಸಂದರ್ಭಗಳಲ್ಲಿಯೂ ದೃಢ ನಾಯಕತ್ವ ಪ್ರದರ್ಶಿಸಿದ ಅವರು ಭಾರತೀಯ ರಾಜಕೀಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ವಿವಿಧ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಮೂಲಕ ರಾಷ್ಟ್ರದ ಏಕೀಕರಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಂಘಟನಾ ಸಾಮರ್ಥ್ಯ, ರಾಷ್ಟ್ರನಿಷ್ಠೆ ಹಾಗೂ ಆಡಳಿತದ ದೃಢತೆ ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋಶಾಧ್ಯಕ್ಷ ಜಯವಂತರಾವ್ ಪತಂಗೆ ಮಾತನಾಡಿ, ಇಂದಿರಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ಬದುಕು ದೇಶಸೇವೆ, ತ್ಯಾಗ ಹಾಗೂ ರಾಷ್ಟ್ರೀಯ ಏಕತೆಯ ಪ್ರತೀಕವಾಗಿದೆ. ಯುವಜನರು ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವ, ಸಾಮಾಜಿಕ ಸಾಮರಸ್ಯ ಮತ್ತು ದೇಶದ ಸಮಗ್ರತೆ ಕಾಪಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಮಹಾನ್ ನಾಯಕರ ಸ್ಮರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಚಿಂತನೆಗಳನ್ನು ಸಮಾಜಮುಖಿ ಕಾರ್ಯಗಳ ಮೂಲಕ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ. ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ನರಸಿಂಹಲು ಮಾಡಗಿರಿ, ದರೂರು ಬಸವರಾಜ ಪಾಟೀಲ್, ತಾಯಣ್ಣ ನಾಯಕ, ಅಬ್ದುಲ್ ಕರೀಂ, ಭೀಮನಗೌಡ ನಾಗಡದಿನ್ನಿ, ರಾಮಕೃಷ್ಣ ನಾಯಕ, ವಿಶ್ವನಾಥ ಪಟ್ಟಿ, ರಮೇಶ ಯಾದವ, ಸುಧೀಂದ್ರ ಜಹಾಗೀರದಾರ, ಫಯಾಜುದ್ದೀನ್, ರಾಣಿ ರಿಚರ್ಡ್, ಶಶಿಕಲಾ ಭೀಮರಾಯ, ಮಂಜುಳಾ ಅಮರೇಶ, ಪಿ. ಸುರೇಖಾ, ರಜಿಯಾ ಪಟೇಲ್, ಹರೀಶಾ ಬೇಗಮ್, ನೂರಜಾಹ, ಮಲ್ಲಿಕಾರ್ಜುನ ನಾಯಕ, ಬಸವರಾಜ ವಕೀಲ, ಜಿ. ಕೇಶವಮೂರ್ತಿ, ಕೆ.ಟಿ. ಶ್ರೀನಿವಾಸ, ವೆಂಕಟೇಶ ಮಂಚಲಾಪುರ, ಶಂಕರ ಹೊಸೂರು, ಲಕ್ಷ್ಮಣ ಮ್ಯಾದಾರ, ಎನ್. ಜಂಬಣ್ಣ ಭಂಡಾರಿ, ಅಮರೇಶ ಭಂಡಾರಿ, ಎಸ್. ರವೀಂದ್ರನಾಥ, ಎಂ.ಡಿ. ಜಾವೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.