ಮಾನ್ವಿ: ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯಂತಹ ಪ್ರಕರಣಗಳು ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಅವುಗಳನ್ನು ಮುಂಚಿತವಾಗಿಯೇ ಗುರುತಿಸಿ ತಡೆಗಟ್ಟುವುದು ಅತ್ಯಂತ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಂಚಿ ಮಾಯಣ್ಣ ಗೌತಮ್ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ್ ಬಚ್ಪನ್ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಮತ್ತು ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ನಡವಳಿಕೆಯಲ್ಲಿ ಕಂಡುಬರುವ ಅಸಹಜ ಬದಲಾವಣೆಗಳು, ದೇಹದ ಮೇಲಿನ ಗಾಯಗಳು, ಭಯ, ಆತಂಕ ಹಾಗೂ ಅವರ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಂತಹ ಲಕ್ಷಣಗಳು ಕಂಡುಬಂದಾಗ ಅವುಗಳ ಹಿಂದಿನ ಕಾರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಶೋಷಣೆಯ ಅನುಮಾನವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಸಂಭವನೀಯ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಂತರ್ಜಾಲ ಬಳಕೆಯಲ್ಲಿಯೂ ಮಕ್ಕಳು ಎಚ್ಚರಿಕೆ ವಹಿಸಬೇಕು. ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಕ್ರಮ ವಿಷಯಗಳನ್ನು ಹುಡುಕುವುದು, ಸಂಗ್ರಹಿಸುವುದು ಅಥವಾ ಹಂಚಿಕೊಳ್ಳುವುದು ಕಾನೂನುಬದ್ಧ ಪರಿಣಾಮಗಳಿಗೆ ಕಾರಣವಾಗಬಹುದು. ಡಿಜಿಟಲ್ ಮಾಧ್ಯಮಗಳ ಬಳಕೆಯಲ್ಲಿ ಸುರಕ್ಷತೆ ಮತ್ತು ಕಾನೂನು ಅರಿವು ಅತ್ಯಗತ್ಯವಾಗಿದೆ. ಯಾವುದೇ ರೀತಿಯ ಶೋಷಣೆ ಅಥವಾ ಅನ್ಯಾಯಕ್ಕೆ ಒಳಗಾದ ಮಕ್ಕಳು ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ಉಚಿತ ಕಾನೂನು ನೆರವು ಪಡೆಯಬಹುದು ಎಂದು ವಿವರಿಸಿದರು.
ಕಿರಿಯ ಸಿವಿಲ್ ನ್ಯಾಯಾಧೀಶ ಆನಂದ ಎಚ್. ಕೊಣ್ಣೂರು ಮಾತನಾಡಿ, ಮಕ್ಕಳನ್ನು ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯಿಂದ ರಕ್ಷಿಸುವ ಉದ್ದೇಶದಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯಡಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಕಾನೂನು ರಕ್ಷಣೆ ದೊರೆಯುತ್ತದೆ. ಶೋಷಣೆಗೆ ಒಳಗಾದ ಮಕ್ಕಳ ಗೌಪ್ಯತೆ, ಸುರಕ್ಷತೆ ಹಾಗೂ ಮಾನಸಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳ ಸ್ನೇಹಿ ವಿಧಾನದಲ್ಲಿ ವಿಚಾರಣೆ ನಡೆಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಗೀಳಿಗೆ ಒಳಗಾಗದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಉತ್ತಮ ಶಿಕ್ಷಣ, ಶಿಸ್ತು ಹಾಗೂ ಕಾನೂನು ಅರಿವಿನ ಮೂಲಕ ಸುರಕ್ಷಿತ ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾನ್ವಿ ಪೊಲೀಸ್ ಠಾಣೆಯ ಎಎಸ್ಐ ಹನುಮೇಶ ಬೊಮ್ಮನಾಳ್, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ವಕೀಲರಾದ ಯಲ್ಲಪ್ಪ ಹಿರೇಬಾದರದಿನ್ನಿ, ಶಿವಪ್ಪನಾಯಕ, ದತ್ತಾತ್ರೇಯ ಹಿರೇಕೊಟ್ನೆಕಲ್, ಶ್ರೀನಿವಾಸ ನಂದಿಹಾಳ್, ಶಶಿಕಾಂತಯ್ಯ, ಚನ್ನಬಸವನಾಯಕ, ಶಕೀಲಬಾದಯಿ, ಶ್ರೀದೇವಿ ಬಳಿಗಾರ, ನಿರ್ಮಲಾ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ವಿಜಯ ಎಸ್.ಕೆ., ನಿಲಯ ಪಾಲಕಿ ಮಂಜುಳಾ, ತಾಲೂಕು ಶಿಕ್ಷಣ ಸಂಯೋಜಕಿ ರಾಚಮ್ಮ, ಸಿಆರ್ಪಿ ಸೋಮಶೇಖರ, ಬಿಆರ್ಪಿ ಸಿದ್ದಲಿಂಗೇಶ್ವರ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



