ಮಾನ್ವಿ: ವೈದ್ಯಕೀಯ ಶಿಕ್ಷಣದ ಮೂಲಕ ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ರೋಗಿಗಳ ಆರೋಗ್ಯ ಸುಧಾರಣೆಗೆ ನಿರಂತರವಾಗಿ ಶ್ರಮಿಸುವ ಮೂಲಕ ವೈದ್ಯಕೀಯ ವೃತ್ತಿಯ ಘನತೆ ಕಾಪಾಡಬೇಕು ಎಂದು ಎಸ್.ವಿ.ವಿ.ಕೆ. ಟ್ರಸ್ಟ್ ಅಧ್ಯಕ್ಷ ಹಾಗೂ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ವೈದ್ಯೋತ್ತಾನ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ತಾನು ಗಳಿಸಿದ ಜ್ಞಾನವನ್ನು ನಿರಂತರವಾಗಿ ಬಳಸಿಕೊಳ್ಳದಿದ್ದರೆ ಅದು ಕ್ರಮೇಣ ಕ್ಷೀಣಿಸುತ್ತದೆ. ಅದೇ ರೀತಿ ವೈದ್ಯಕೀಯ ಶಿಕ್ಷಣದ ಅವಧಿಯಲ್ಲಿ ಪಡೆದ ಜ್ಞಾನವನ್ನು ರೋಗಿಗಳ ಚಿಕಿತ್ಸೆ ಹಾಗೂ ಆರೋಗ್ಯ ರಕ್ಷಣೆಗೆ ಬಳಸಿಕೊಳ್ಳದಿದ್ದರೆ ಅದರ ಮಹತ್ವ ಕಡಿಮೆಯಾಗುತ್ತದೆ. ಐದು ವರ್ಷಗಳ ಕಾಲ ಅಧ್ಯಯನ ಮಾಡಿ ಗಳಿಸಿದ ವೈದ್ಯಕೀಯ ಜ್ಞಾನವನ್ನು ಅಗತ್ಯವಿರುವ ಜನರ ಸೇವೆಗೆ ಬಳಸಿದಾಗ ವೃತ್ತಿಪರ ಅನುಭವ ಹಾಗೂ ಪರಿಣತಿ ಹೆಚ್ಚುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ವೃತ್ತಿಯು ಕೇವಲ ಜೀವನೋಪಾಯಕ್ಕೆ ಸೀಮಿತವಾಗದೆ ಮಾನವೀಯ ಸೇವೆಯ ಸಾಧನವಾಗಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರ ಬದುಕಿನಲ್ಲಿ ಆರೋಗ್ಯ ಮತ್ತು ನೆಮ್ಮದಿ ಮೂಡಿಸಬೇಕು. ವೈದ್ಯರು ಸಮಾಜದ ಬಗ್ಗೆ ಕಾಳಜಿ ಹೊಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಅವರ ವೃತ್ತಿಜೀವನವೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜೀವನೇಶ್ವರಯ್ಯ ಮಾತನಾಡಿ, ಎಸ್.ವಿ.ವಿ.ಕೆ. ಟ್ರಸ್ಟ್‌ನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಅನುಭವಿ ಉಪನ್ಯಾಸಕರ ನೆರವಿನಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಆಯುರ್ವೇದ ವೈದ್ಯಕೀಯ ಪದ್ಧತಿಯ ವಿವಿಧ ವಿಷಯಗಳಲ್ಲಿ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಲಿತ ವಿಷಯಗಳನ್ನು ವೃತ್ತಿಜೀವನದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಲು ಅಗತ್ಯ ಮಾರ್ಗದರ್ಶನ ಹಾಗೂ ವೈದ್ಯಕೀಯ ಸೇವೆ ಒದಗಿಸಬೇಕು. ಜತೆಗೆ ತಾವು ಶಿಕ್ಷಣ ಪಡೆದ ಸಂಸ್ಥೆಯ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಅಗಸ್ತ್ಯ–2026 ತಂಡದ 52ಕ್ಕೂ ಹೆಚ್ಚು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪದವೀಧರರಿಗೆ ವೈದ್ಯಕೀಯ ವೃತ್ತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣದ ಸ್ತ್ರೀರೋಗ ತಜ್ಞೆ ಡಾ. ರೋಹಿಣಿ ಮಾನ್ವಿಕರ್, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ. ರೂಪಾಬಾಯಿ, ಸಿಂಧನೂರಿನ ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಕಾಲೇಜಿನ ಉಮಾಶಂಕರ ಎಚ್.ಎಂ., ಡಾ. ಸುರೇಶರಾವ್ ದೇಶಪಾಂಡೆ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.