ಮಾನ್ವಿ: ಪಟ್ಟಣದ 5ನೇ ವಾರ್ಡ್ನ ಜನವಸತಿ ಪ್ರದೇಶದಲ್ಲಿರುವ ಶ್ರೀನಿಧಿ ಭಾರತ್ ಗ್ಯಾಸ್ ಸಂಸ್ಥೆಯ ಅಡುಗೆ ಅನಿಲ ಸಿಲಿಂಡರ್ಗಳ ಗೋದಾಮನ್ನು ಪಟ್ಟಣದ ಹೊರವಲಯದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ 5ನೇ ವಾರ್ಡ್ನ ನಿವಾಸಿಗಳು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿ, ಗೋದಾಮಿನಿಂದ ಸಂಭವಿಸಬಹುದಾದ ಅಗ್ನಿ ಅವಘಡಗಳ ಕುರಿತು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷ ಆನಂದಸ್ವಾಮಿ ಹಿರೇಮಠ, ಅಡುಗೆ ಅನಿಲ ಸೇರಿದಂತೆ ಸ್ಫೋಟಕ ಸ್ವಭಾವದ ವಸ್ತುಗಳನ್ನು ಜನವಸತಿ ಪ್ರದೇಶಗಳಿಂದ ದೂರವಿರುವ ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಬೇಕು. ಆದರೆ ಶ್ರೀನಿಧಿ ಭಾರತ್ ಗ್ಯಾಸ್ ಸಂಸ್ಥೆಯು ಪಟ್ಟಣದ 5ನೇ ವಾರ್ಡ್ನ ಜನವಸತಿ ಪ್ರದೇಶದ ಮಧ್ಯದಲ್ಲಿಯೇ ಅಡುಗೆ ಅನಿಲ ಸಿಲಿಂಡರ್ಗಳನ್ನು ಸಂಗ್ರಹಿಸಲು ಗೋದಾಮು ಹೊಂದಿದೆ ಎಂದು ಆರೋಪಿಸಿದರು.
ಈ ಗೋದಾಮಿನಿಂದ ಪ್ರತಿದಿನ ವಾಹನಗಳ ಮೂಲಕ ನೂರಾರು ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ಗಳನ್ನು ಸರಬರಾಜು ಮಾಡಲಾಗುತ್ತಿದೆ. ಗೋದಾಮಿನಲ್ಲಿ ಹೆಚ್ಚಿನ ಸಂಖ್ಯೆಯ ಸಿಲಿಂಡರ್ಗಳನ್ನು ಸಂಗ್ರಹಿಸಿರುವುದರಿಂದ ಅನಿಲ ಸೋರಿಕೆ ಅಥವಾ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಲ್ಲಿ ಸುತ್ತಮುತ್ತಲಿನ ನಿವಾಸಿಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋದಾಮಿನಲ್ಲಿ ಒಂದು ಸಿಲಿಂಡರ್ ಸ್ಫೋಟಗೊಂಡರೂ ಅದರ ಪರಿಣಾಮ ಇತರ ಸಿಲಿಂಡರ್ಗಳಿಗೂ ವ್ಯಾಪಿಸಿ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಅಪಾಯವಿದೆ. ಇದರಿಂದ ಸಾರ್ವಜನಿಕರ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.
ಗೋದಾಮಿನ ಸುತ್ತಮುತ್ತ ಆಸ್ಪತ್ರೆಗಳು, ಜನವಸತಿ ಪ್ರದೇಶಗಳು, ವಿಶ್ವಚೇತನ ಹಿರಿಯ ಪ್ರಾಥಮಿಕ ಶಾಲೆ, ಬಿ.ವಿ.ಆರ್. ಶಾಲೆ ಹಾಗೂ ಬಿ.ವಿ.ಆರ್. ವಸತಿ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗೋದಾಮಿನ ಸ್ಥಳ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಅಡುಗೆ ಅನಿಲ ಸಿಲಿಂಡರ್ಗಳ ಸಂಗ್ರಹಣೆಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಶ್ರೀನಿಧಿ ಭಾರತ್ ಗ್ಯಾಸ್ ಸಂಸ್ಥೆಯ ಗೋದಾಮನ್ನು ಪಟ್ಟಣದ ಹೊರವಲಯದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜಾ ಸುಭಾಷ್ಚಂದ್ರ ನಾಯಕ, ಎಚ್. ಶರಫುದ್ದೀನ್ ಪೋತ್ನಾಳ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಚನ್ನಬಸವಗೌಡ ಗವಿಗಟ್ಟು, ಜಿಲ್ಲಾ ಉಪಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ತಾಲೂಕು ಅಧ್ಯಕ್ಷ ಭೀಮಣ್ಣ ಮುದಗಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ ಗೊಲ್ಲದಿನ್ನಿ, ಕೆ. ಶಿವಕುಮಾರ್, ಎಚ್. ಮುಕ್ತಾರ್ ಅನೀಫ್, ಕುರ್ಮಾ, ಶೇಖ್ ಫರೀದ್ ಉಮ್ರಿ, ರಾಜು ತಾಳಿಕೋಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗಿರಿ ನಾಯಕ, ನಾಗರಾಜ ಮೇಟಿ, ಅಫ್ರೋಜ್, ಮನೋಹರ ಆಚಾರಿ, ಸುನಿಲ್ ಬೆಟ್ಟದೂರು, ಲಿಂಗರಾಜ ತಡಕಲ್, ಹುಸೇನಿ, ಹನುಮೇಶ ನಾಯಕ, ಅಮರೇಗೌಡ ಮುಟ್ಟೂರು, ಮರಿಸ್ವಾಮಿ ಶಾಂತಗೆಲ್ ಸೇರಿದಂತೆ 5ನೇ ವಾರ್ಡ್ನ ನಿವಾಸಿಗಳು ಉಪಸ್ಥಿತರಿದ್ದರು.



