ಮಾನ್ವಿ: ಪಟ್ಟಣದ ವಾಕ್ಸಿದ್ಧಿ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ವಿದ್ಯಾರ್ಥಿಗಳ ವೈಜ್ಞಾನಿಕ ಪ್ರತಿಭೆಯನ್ನು ಅನಾವರಣಗೊಳಿಸುವ ವಿಜ್ಞಾನ ವೈಭವ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಭಾರತದ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿಜ್ಞಾನ ವೈಭವ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಹಾಗೂ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ತಾವು ಸಿದ್ಧಪಡಿಸಿದ ವಿವಿಧ ಮಾದರಿಗಳು ಮತ್ತು ಪ್ರದರ್ಶನಗಳ ಕುರಿತು ಭೇಟಿ ನೀಡಿದ ಪಾಲಕರಿಗೆ ವಿವರಣೆ ನೀಡುವ ಮೂಲಕ ಗಮನ ಸೆಳೆದರು.

ವಿಜ್ಞಾನ ವೈಭವ ವಸ್ತುಪ್ರದರ್ಶನಕ್ಕೆ ಅನೇಕ ಪಾಲಕರು ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಯತ್ನಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರದರ್ಶನಗಳ ಕುರಿತು ನೀಡಿದ ವಿವರಣೆಗಳು ಹಾಗೂ ಅವರ ವಿಷಯಜ್ಞಾನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ರಾಮಲಿಂಗಪ್ಪ ಅವರು ಸಹ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಜ್ಞಾನಿಕ ಮಾದರಿಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಆಸಕ್ತಿ, ಪರಿಶ್ರಮ ಹಾಗೂ ಸೃಜನಶೀಲತೆಯನ್ನು ಪ್ರಶಂಸಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಡಾ. ಸಜ್ಜಾದ್ ಹುಸೇನ್, ಶಾಲೆಯ ಅಧ್ಯಕ್ಷ ಬಿ. ಬಲರಾಮಕೃಷ್ಣ ವಕೀಲರು, ಕಾರ್ಯದರ್ಶಿ ದಾಮೋದರ್, ಖಜಾಂಚಿ ಶ್ರೀನಿವಾಸ್, ಮುಖ್ಯಗುರು ಹರಿಣಿ ಸೇರಿದಂತೆ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.