ಶರವೇಗದಲ್ಲಿ ಮುನ್ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಈ ಯುಗದಲ್ಲಿ ಭಾಷೆಯೆನ್ನುವುದು ಕೇವಲ ಕೋಡ್ ಮತ್ತು ಸಂಖ್ಯೆಗಳಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ. ಸಂವಹನದ ವಿಷಯಕ್ಕೆ ಬಂದರೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಹೆಚ್ಚಿನ ಮನ್ನಣೆ ನೀಡುವುದನ್ನು ಐಟಿ ಕಂಪನಿಗಳಲ್ಲಿ ಕಾಣುತ್ತಿದ್ದೇವೆ. ಇದರಾಚೆಗೆ ಬಂದರೂ ಅಲ್ಲಿಯೂ ನೆಲಮೂಲದ ಭಾಷೆಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ.
ಕರ್ನಾಟಕದ ಯಾವುದೇ ಭಾಗಕ್ಕೆ ಹೋಗಿ ನೋಡಿ, ಕನ್ನಡದೊಂದಿಗೆ ಅನ್ಯ ಭಾಷೆಗಳ ಬಳಕೆಯೂ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಅದರಲ್ಲೂ ಝೆನ್ ಜೀ ಮತ್ತು ಆಲ್ಫಾ ಪೀಳಿಗೆಯ ಅನೇಕ ಮಕ್ಕಳಿಗೆ ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. ಕನ್ನಡ ಮಾತನಾಡಲು ನಾಲಗೆ ತಿರುಗುವುದಿಲ್ಲ. ಇದು ಭಾಷೆಯ ಮೇಲಿನ ಅಸಡ್ಡೆಯೋ ಅಥವಾ ಫ್ಯಾಷನ್ ನೆಪದಲ್ಲಿ ಪರಭಾಷೆಗಳ ವ್ಯಾಮೋಹವೋ ತಿಳಿಯದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಯಾರಾದರೂ ಕನ್ನಡದ ಬಗ್ಗೆ ಮಾತನಾಡುತ್ತಿದ್ದರೆ ಅಥವಾ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದರೆ ರಾಜ್ಯೋತ್ಸವ ಹತ್ತಿರ ಬಂತೆಂದು ತಿಳಿಯುತ್ತಾರೆಯೇ ವಿನಾ, ಕನ್ನಡವೆನ್ನುವುದು ಕೇವಲ ಹೆಸರಲ್ಲ, ಅದು ನಮ್ಮ ಉಸಿರು ಎನ್ನುವ ಅರಿವು ಮೂಡುವುದಾದರೂ ಯಾವಾಗ?
ಕನ್ನಡವೆಂದರೆ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವೇ? ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡವೇ? ಉಳಿದ ಹನ್ನೊಂದು ತಿಂಗಳು ಕಂಗ್ಲಿಷ್, ಎನ್ನಡ, ಎಕ್ಕಡ, ಎವಂಡಿ, ವಾಂಗ, ಪೋಂಗ ಎಂಬ ಧ್ವನಿಗಳೇ ಮಾರ್ದನಿಸುತ್ತವೆ.
ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿನಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಹಾಗಾದರೆ ಇಲ್ಲಿದ್ದ ಕನ್ನಡ ಭಾಷಿಗರು ವಲಸೆ ಹೋಗಿದ್ದಾರೆಯೇ ಅಥವಾ ಕನ್ನಡ ಮಾತನಾಡುವುದನ್ನೇ ಮರೆತಿದ್ದಾರೆಯೇ? ಕನ್ನಡವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಕಲಿಸುವುದನ್ನು ಅವಮಾನವೆಂದು ಭಾವಿಸಿದ್ದಾರೆಯೇ? ಅಥವಾ ಮಾತೃಭಾಷೆಯ ಬಗ್ಗೆ ತಿರಸ್ಕಾರವೇ? ಹೀಗೆ ಯೋಚಿಸುತ್ತ ಹೋದಂತೆ ಪ್ರಶ್ನೆಗಳ ಸರಮಾಲೆಯೇ ನಮ್ಮನ್ನು ಕಾಡುತ್ತದೆ.
ಬ್ರಾಹ್ಮಿ ಲಿಪಿಯ ಪರಂಪರೆಯಿಂದ ಬೆಳೆದು ಬಂದ ನಮ್ಮ ಕನ್ನಡ ಭಾಷೆ ಅತ್ಯಂತ ಪ್ರಬುದ್ಧ ಭಾರತೀಯ ಭಾಷೆಗಳಲ್ಲೊಂದಾಗಿದೆ. ಬರೆದದ್ದನ್ನು ಓದುವ ಮತ್ತು ಓದಿದ್ದನ್ನೇ ಬರೆಯುವ ವೈಶಿಷ್ಟ್ಯ ಹೊಂದಿರುವ ಭಾಷೆಯಾಗಿದೆ. ಸರಳ, ಸುಂದರ, ಸ್ಪಷ್ಟ ಉಚ್ಚಾರಣೆ ಹಾಗೂ ಸ್ವರಮಾಧುರ್ಯದಿಂದ ಕೂಡಿದ ನಮ್ಮ ಭಾಷೆಗೆ ಭವ್ಯ ಐತಿಹಾಸಿಕ ಹಿನ್ನೆಲೆಯಿದೆ. ನಮ್ಮ ಭಾಷೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳ ಪ್ರತಿಬಿಂಬ. ಇದನ್ನು ನಾವು ಮನಗಂಡಾಗ ಮಾತ್ರ ನಮ್ಮ ಭಾಷೆಯ ನಿಜವಾದ ಮೌಲ್ಯ ಅರಿವಾಗುತ್ತದೆ.
ನಮ್ಮ ಹಿಂದಿನ ತಲೆಮಾರಿನವರು ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದರು. ಕರ್ನಾಟಕದಲ್ಲಿ ಎಲ್ಲರೂ ಇರಲಿ, ಆದರೆ ಕನ್ನಡವನ್ನು ಮೊದಲು ಕಲಿಯಲಿ ಎಂಬ ದಿಟ್ಟ ನಿಲುವಿನಿಂದ ಕನ್ನಡ ಭಾಷೆಗೆ ನವಚೈತನ್ಯ ತುಂಬಿದ ಕನ್ನಡದ ಹೋರಾಟಗಾರ ಅ.ನ.ಕೃ. ಅವರು 1960ರ ದಶಕದಲ್ಲಿ ಬೆಂಗಳೂರಿನಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರಕಿಸಿಕೊಡಲು ಶ್ರಮಿಸಿದ್ದರು. ಅಂದಿನ ಪೀಳಿಗೆಯ ಜನರ ಉಸಿರಿನ ಕಣಕಣದಲ್ಲೂ ಕನ್ನಡಾಭಿಮಾನ ಉಕ್ಕಿ ಹರಿಯುತ್ತಿತ್ತು.
ಬೇರೆಯವರಿಗೆ ಮಾತನಾಡಲು ಬೇರೆ ಬೇರೆ ಭಾಷೆಗಳಿರಬಹುದು. ಕನ್ನಡಕ್ಕೆ ನನ್ನಂಥವರು ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ. ಅದನ್ನು ಉಳಿಸಿ, ಬೆಳೆಸುವ ಹೊಣೆ ಕನ್ನಡಿಗರದ್ದು ಎಂಬ ಸಂದೇಶ ನೀಡಿದ ಮಹಾನ್ ಕನ್ನಡಿಗರು ಅವರಾಗಿದ್ದರು. ಕನ್ನಡಾಭಿಮಾನ ಮಾತಿಗೆ ಸೀಮಿತವಾಗದೆ ನಡೆ, ನುಡಿ ಮತ್ತು ಕೃತಿಯಲ್ಲಿ ಪ್ರತಿಫಲಿಸಬೇಕೆಂದು ಅಂದಿನವರು ಶ್ರಮಿಸಿದರು.
ನಮ್ಮ ಕವಿಪುಂಗವರು ಕನ್ನಡ ಭಾಷೆಯ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ.
ಎಲ್ಲಾದರು ಇರು, ಎಂತಾದರು ಇರು\ ಎಂದೆಂದಿಗು ನೀ ಕನ್ನಡವಾಗಿರು\ ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳು ಭಾಷಾಭಿಮಾನದ ದ್ಯೋತಕವಾಗಿವೆ.
ಕನ್ನಡ ಎನೆ ಕುಣಿದಾಡುವುದೆನ್ನೆದೆ\ ಕನ್ನಡ ಎನೆ ಕಿವಿ ನಿಮಿರುವುದು\ ಕಾಮನ ಬಿಲ್ಲನು ಕಾಣುವ ಕವಿಯೊಳು\ ತೆಕ್ಕನೆ ಮನ ಮೈ ಮರೆಯುವುದು.
ಸ್ವರಮಾಧುರ್ಯದಿಂದ ಕೂಡಿದ ಕಸ್ತೂರಿ ಕನ್ನಡ ಭಾಷೆಯೆಂದರೆ ಮನವು ಕುಣಿಯುತ್ತದೆ. ಕನ್ನಡದ ನುಡಿಗಳನ್ನು ಕೇಳಿದ ತಕ್ಷಣ ಕಿವಿಗಳು ನೆಟ್ಟಗಾಗುತ್ತವೆ. ಕಾಮನಬಿಲ್ಲಿನ ಬಣ್ಣ ಮತ್ತು ಸೌಂದರ್ಯಕ್ಕೆ ಮೋಹಗೊಂಡಂತೆ ಮನಸ್ಸು ಪ್ರಫುಲ್ಲಿತವಾಗುತ್ತದೆ. ಕನ್ನಡ ಮಾತನಾಡಲು ಸರಳವಾಗಿದ್ದು, ಅದರ ಸೊಗಸು ಸಿಹಿಯನ್ನು ಸವಿದಂತಿರುತ್ತದೆ.
ಪುಣ್ಯಪುರುಷರು ಜನಿಸಿದ ಕರುನಾಡು\ ಮಲೆನಾಡಿನ ಮಣ್ಣಿನ ಘಮಲು ನೋಡು\ ಸಮೃದ್ಧ ಭಾವೈಕ್ಯತೆಯ ಹೊನ್ನಿನ ಗೂಡು\ ದಾಸರ ಕೀರ್ತನೆಗಳನ್ನು ನಿತ್ಯವೂ ಹಾಡು.
ಪಾಲಿಸಲು ವಚನಗಳ ಬೋಧಿಸಿದ ಶರಣ\ ತೀರಿಸಲಾಗದು ಕನ್ನಡಮ್ಮನ ಮಣ್ಣಿನ ಋಣ\ ತೊಡಿಸು ಕಸ್ತೂರಿ ಕನ್ನಡದ ನುಡಿ ಆಭರಣ\ ಕನ್ನಡದ ಉತ್ಸವ ದಿನನಿತ್ಯ ಆಚರಿಸೋಣ.
ಕನ್ನಡವಿಲ್ಲದೆ ಬಾಳಿಲ್ಲ. ಪ್ರತಿಯೊಬ್ಬರ ನಡೆನುಡಿಗಳಲ್ಲಿ ಕನ್ನಡವಿದ್ದರೆ ಕನ್ನಡ ಭಾಷೆಯ ಏಳಿಗೆಯಾಗುತ್ತದೆ. ಕನ್ನಡಮ್ಮನ ಸೇವೆ ಮಾಡಿದಂತಾಗುತ್ತದೆ. ಕನ್ನಡಿಗರಾದ ನಾವೆಲ್ಲರೂ ನಮ್ಮ ಭಾಷೆಯನ್ನು ಪ್ರೀತಿಸೋಣ. ಗೌರವದಿಂದ ಆದರಿಸಿ, ಆಸ್ವಾದಿಸಿ, ಇತರರಿಗೂ ಕನ್ನಡವನ್ನು ಕಲಿಸೋಣ.
ಎಲ್ಲೆಡೆ ಕನ್ನಡದ ಪತಾಕೆ ಹಾರಾಡಲಿ\ ಕನ್ನಡ ನಮ್ಮಯ ನಡೆನುಡಿಯಾಗಲಿ\ ಕನ್ನಡವೇ ಸತ್ಯ, ಕನ್ನಡವೇ ನಿತ್ಯವಾಗಲಿ\ ಉಸಿರಾಗಿ ಕನ್ನಡ ವಿಶ್ವಮಾನ್ಯವಾಗಲಿ.
ಇದು ನಮ್ಮೆಲ್ಲರ ಆಶಯ. ಆದರೆ ವಾಸ್ತವ ಹೇಗಿದೆ ಗೊತ್ತೇ? ಕರ್ನಾಟಕದಲ್ಲಿ ಕನ್ನಡದ ಬಳಕೆಯ ಸ್ಥಿತಿಗತಿಗಳನ್ನು ಗಮನಿಸಿದಾಗ ಆತಂಕ ಮೂಡುತ್ತದೆ.
ಸುವರ್ಣ ಕರ್ನಾಟಕ ರಥವು ಕಳೆದ ವರ್ಷ ರಾಜ್ಯದಾದ್ಯಂತ ಸಂಚರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತು. ಆದರೂ ಕರುನಾಡಿನಲ್ಲಿ ಕನ್ನಡ ಭಾಷೆ ಎಲ್ಲರ ಉಸಿರಾಗಿಲ್ಲವೆನ್ನುವುದು ವಿಷಾದನೀಯ. ಇಲ್ಲಿನ ನೆಲ, ಜಲ, ಗಾಳಿ, ಅಧಿಕಾರ, ಸಂಪತ್ತು, ಸಾರಿಗೆ, ಸೌಲಭ್ಯ ಎಲ್ಲವೂ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡವೆಂದರೆ ಇದೆಂತಹ ದುರದೃಷ್ಟ!
ಹೊಗಳುಭಟರು ಮತ್ತು ಭಟ್ಟಂಗಿಗಳ ನಡುವೆ ನಮ್ಮ ಕನ್ನಡ ಸೊರಗುತ್ತಿದೆ. ಉತ್ತರ ಭಾರತದ ಕೆಲವು ಮಂದಿ ತಾವು ಬಂದು ಬೆಂಗಳೂರನ್ನು ಬೆಳೆಸಿದ್ದೇವೆ, ತಾವಿಲ್ಲದಿದ್ದರೆ ಬೆಂಗಳೂರು ಖಾಲಿಯಾಗುತ್ತದೆ ಎಂಬ ರೀತಿಯಲ್ಲಿ ಉಡಾಫೆಯ ಮಾತುಗಳನ್ನಾಡುತ್ತಾರೆ. ಕೆಲವು ಸ್ಟ್ಯಾಂಡ್ಅಪ್ ಕಾಮಿಡಿ ಕಾರ್ಯಕ್ರಮಗಳಲ್ಲಿ ಕನ್ನಡಿಗರನ್ನು ಮತ್ತು ಬೆಂಗಳೂರಿಗರನ್ನು ಹಾಸ್ಯದ ಹೆಸರಿನಲ್ಲಿ ಕಿಚಾಯಿಸಲಾಗುತ್ತದೆ. ನರಸತ್ತವರು, ಹೆದರುಪುಕ್ಕರು ಮುಂತಾದ ಪದಗಳನ್ನು ಬಳಸಲಾಗುತ್ತದೆ ಎಂಬ ಆಕ್ಷೇಪಗಳೂ ಕೇಳಿಬರುತ್ತವೆ.
ಆದರೂ ನಾವು ತಾಳ್ಮೆಯಿಂದ ಅಂತಹ ಕಾರ್ಯಕ್ರಮಗಳನ್ನು ನೋಡಿ, ನಕ್ಕು ಸುಮ್ಮನಾಗುತ್ತೇವೆ. ನನಗೇಕೆ ಬೇಕು ಈ ವಿಷಯ ಎಂಬ ಅಸಡ್ಡೆ ನಮ್ಮೆಲ್ಲರಲ್ಲೂ ಬೆಳೆಯುತ್ತಿದೆಯಲ್ಲವೇ? ನಮ್ಮ ಮತ್ತು ನಮ್ಮ ಕುಟುಂಬದವರ ಹಿತಾಸಕ್ತಿಯ ಹೊರತಾಗಿ ಭಾಷೆ, ನೆಲ, ಜಲದ ಬಗ್ಗೆ ಕಿಂಚಿತ್ತೂ ಯೋಚಿಸಲು ನಮಗೆ ಸಮಯವಿಲ್ಲವೇ? ಎಂತಹ ಸ್ವಾರ್ಥಿಗಳಾಗುತ್ತಿದ್ದೇವೆ ನಾವು!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಆಶಯದೊಂದಿಗೆ ಹುಯಿಲಗೋಳ ನಾರಾಯಣರಾಯರು ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕನ್ನಡದ ಸೌಲಭ್ಯಗಳನ್ನು ಪಡೆದವರೇ ಕನ್ನಡವನ್ನು ಉಪೇಕ್ಷಿಸುವುದು ತಾಯಿ ಭುವನೇಶ್ವರಿಯ ಕರುಳು ಹಿಂಡಿದಂತಲ್ಲವೇ? ಕನ್ನಡಮ್ಮನ ಎದೆಹಾಲು ಕುಡಿದವರೇ ಕನ್ನಡ ಬರುವುದಿಲ್ಲವೆಂದು ತಾತ್ಸಾರದಿಂದ ಮಾತನಾಡಿದರೆ ರೋಷ ಉಕ್ಕುವುದಿಲ್ಲವೇ? ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ಸ್ಥಳೀಯ ಭಾಷೆಯನ್ನು ಎಲ್ಲರೂ ಕಲಿಯಬೇಕಲ್ಲವೇ?
ಇಂದು ಭಾಷಾ ಕಲಿಕೆಯ ಗುಣಮಟ್ಟದ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಾಗಿದೆ. ಕನ್ನಡ ಬೋಧಿಸುವವರ ಭಾಷಾ ಪ್ರಾವೀಣ್ಯ, ಉಚ್ಚಾರಣೆ ಮತ್ತು ಬೋಧನಾ ಸಾಮರ್ಥ್ಯ ಉತ್ತಮವಾಗಿರಬೇಕು. 'ಅ' ಮತ್ತು 'ಹ', 'ಸ' ಮತ್ತು 'ಶ', 'ಲ' ಮತ್ತು 'ಳ' ಅಕ್ಷರಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಂಡು ಬೋಧಿಸುವುದು ಅತ್ಯಗತ್ಯ.
ಕೆಲವು ಶಿಕ್ಷಕರ ಉಚ್ಚಾರಣೆ ಮತ್ತು ಭಾಷಾ ಬಳಕೆಯಲ್ಲಿನ ದೋಷಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಕನ್ನಡ ಕಲಿಸುವವರೇ ಭಾಷೆಯ ಶುದ್ಧತೆ ಮತ್ತು ಸೊಗಸಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಅವರಿಂದ ಶಿಕ್ಷಣ ಪಡೆಯುವ ಮಕ್ಕಳ ಭಾಷಾ ಸಾಮರ್ಥ್ಯ ಹೇಗೆ ಬೆಳೆಯುತ್ತದೆ? ಶಿಕ್ಷಕರ ನೇಮಕಾತಿಯಲ್ಲಿ ಅರ್ಹತೆ, ಭಾಷಾ ಪ್ರಾವೀಣ್ಯ ಮತ್ತು ಬೋಧನಾ ಕೌಶಲ್ಯಕ್ಕೆ ಸೂಕ್ತ ಆದ್ಯತೆ ದೊರೆಯಬೇಕು. ಆಡಳಿತದಲ್ಲಿರುವವರ ಕನ್ನಡ ಬಳಕೆಯೂ ಉತ್ತಮವಾಗಬೇಕಾಗಿದೆ. ನಮ್ಮವರಿಂದಲೇ ನಮ್ಮ ಭಾಷೆ ನಲುಗದಂತೆ ಎಚ್ಚರ ವಹಿಸಬೇಕು.
'ಕನ್ನಡ ಬರೊಲ್ಲ' ಎಂದು ಹೇಳುವ ಕನ್ನಡದ ಕಂದನ ಆತ್ಮವಂಚನೆಯ ಕ್ಷಣ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಇಲ್ಲಿ ನಮ್ಮವರೇ ನಮ್ಮ ಭಾಷೆಗೆ ಹಿತಶತ್ರುಗಳಾಗುತ್ತಿರುವುದು ವಿಷಾದನೀಯ.
ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಎಂದು ಮಕ್ಕಳಿಗೆ ಹೇಳಿಕೊಡುವ ಪಾಲಕರೇ, ಎಚ್ಚರಗೊಳ್ಳಿ. ಮಕ್ಕಳಿಗೆ ಮಾತೃಭಾಷೆಯೊಂದಿಗೆ ನಮ್ಮ ನೆಲದ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯವನ್ನೂ ಮಾಡಿಕೊಡಿ. ಶಾಲೆಯಲ್ಲಿ ವಿವಿಧ ಭಾಷೆಗಳನ್ನು ಕಲಿಯಲಿ. ಆದರೆ ಮನೆಯಲ್ಲಿಯೂ ಇಂಗ್ಲಿಷ್ ಭಾಷೆಯೇ ಬೇಕೆಂಬ ವ್ಯಾಮೋಹವೇಕೆ? ಕನ್ನಡ ಕಲಿತು, ಕನ್ನಡದಲ್ಲಿ ವ್ಯವಹರಿಸಿದರೆ ಭಾಷಾಜ್ಞಾನ ಬೆಳೆಯುತ್ತದೆಯಲ್ಲವೇ? ಇದು ನಮಗೂ ನಿಮಗೂ ಹೆಮ್ಮೆಯ ವಿಷಯವಲ್ಲವೇ?
ಭಾಷೆಯನ್ನು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರದ್ದು. ಕನ್ನಡ ಭಾಷೆ ನಮಗೆ ಅಸ್ತಿತ್ವ, ಸ್ವಾಭಿಮಾನ ಮತ್ತು ಸ್ವಂತಿಕೆಯನ್ನು ನೀಡಿದೆ. 'ಮಾತಾಡು ಮಾತಾಡು ಕನ್ನಡ' ಎನ್ನುತ್ತಾ ಎಲ್ಲರೊಂದಿಗೆ ಕನ್ನಡದಲ್ಲಿ ವ್ಯವಹರಿಸೋಣ.
ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡ ಮಾತನಾಡುವವರು ನೆಲೆಸಿರುವಾಗ, ನಮ್ಮ ಕರ್ನಾಟಕದಲ್ಲಿ ನೆಲೆಸಿರುವ ಬೇರೆ ರಾಜ್ಯದವರಿಗೂ ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಸೋಣ. ಅವರಿಗೂ ಕನ್ನಡದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಪ್ರಯತ್ನಗಳು ನಡೆಯಬೇಕಿವೆ.
ಕನ್ನಡ ಭಾಷೆ ನಮ್ಮ ಅಭಿಮಾನದ ದ್ಯೋತಕವಾಗಲಿ. ನಮ್ಮೆಲ್ಲರ ಉಸಿರಾಗಲಿ. ಕನ್ನಡಕ್ಕಾಗಿ ನಾವು ಬದುಕೋಣ. ಈ ನೆಲದ ಮಣ್ಣಿನ ಋಣವನ್ನು ತೀರಿಸೋಣ.
ಕನ್ನಡವೆಂದರೆ ಬರೀ ನುಡಿಯಲ್ಲ\ ಹಿರಿದಿದೆ ಅದರರ್ಥ\ ಜಲವೆಂದರೆ ಕೇವಲ ನೀರಲ್ಲ\ ಅದು ಪಾವನ ತೀರ್ಥ\ ಕನ್ನಡವೆಂದರೆ ಬರೀ ನಾಡಲ್ಲ\ ಭೂಪಟದ ಗೆರೆ ಚುಕ್ಕಿ\ ಮರವೆಂದರೆ ಬರೀ ಕಟ್ಟಿಗೆಯೇ\ ಶ್ರೀಗಂಧದ ಚಕ್ಕೆ.
ಕವಿ ನಿಸಾರ್ ಅಹಮದ್ ಅವರ ಈ ಸಾಲುಗಳನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುತ್ತಾ, ಕನ್ನಡವೆಂದರೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಅರಿಯೋಣ.
ನಮ್ಮ ಧಮನಿ ಧಮನಿಯಲ್ಲೂ ಭಾಷಾಪ್ರೇಮ ಉಕ್ಕಿ ಹರಿಯಲಿ. ಕನ್ನಡ ಎಲ್ಲೆಲ್ಲೂ ಮೊಳಗಲಿ, ಅನವರತ ಬೆಳಗಲಿ. ಭಾಷೆ ಬೆಳೆಯಲಿ, ನಾಡು ಉಳಿಯಲಿ. ನೆಲದ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ಹರಡಲಿ ಎಂಬ ಆಶಯದೊಂದಿಗೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರೋಣವೇ? ಏನಂತೀರಿ?
ಪುಷ್ಪಲತಾ ಕೆ.ಎಸ್. ಹೆಗಡೆ



