ಮಾನ್ವಿ: ಜಾಗತೀಕರಣ ಮತ್ತು ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದು ಎಷ್ಟು ಅಗತ್ಯವೋ, ಅಷ್ಟೇ ಮಹತ್ವವನ್ನು ಮಾತೃಭಾಷೆ ಕನ್ನಡದ ಸಂರಕ್ಷಣೆ ಮತ್ತು ಬೆಳವಣಿಗೆಗೂ ನೀಡಬೇಕು ಎಂದು ಮಾನ್ವಿ ಶಾಸಕ ಜಿ. ಹಂಪಯ್ಯ ನಾಯಕ ಸಾಹುಕಾರ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಜನರ ಅಸ್ಮಿತೆಯ ಪ್ರತೀಕವಾಗಿದೆ. ಇತರ ಭಾಷೆಗಳ ಕಲಿಕೆಯೊಂದಿಗೆ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಅದರ ಬಳಕೆಯನ್ನು ಹೆಚ್ಚಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಭವಿಷ್ಯ ಯುವಜನರ ಕೈಯಲ್ಲಿದೆ. ಯುವಕರು ಕನ್ನಡ ಭಾಷೆಯನ್ನು ಪ್ರೀತಿಸುವುದಕ್ಕೆ ಮಾತ್ರ ಸೀಮಿತವಾಗದೆ, ದೈನಂದಿನ ಜೀವನ, ಶಿಕ್ಷಣ, ತಂತ್ರಜ್ಞಾನ, ಉದ್ಯೋಗ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯನ್ನು ವಿಸ್ತರಿಸಲು ಮುಂದಾಗಬೇಕು. ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ಜೊತೆಗೆ ಕನ್ನಡ ಭಾಷೆಯ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕನ್ನಡ ಭಾಷೆಯ ಬಳಕೆ ಕುಸಿಯುತ್ತಿರುವುದು, ನಿರುದ್ಯೋಗ, ರೈತರ ಸಂಕಷ್ಟ, ಪ್ರಾದೇಶಿಕ ಅಸಮಾನತೆ, ನೀರಿನ ಕೊರತೆ, ಪರಿಸರ ಮಾಲಿನ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳು ಗಂಭೀರ ಸಮಸ್ಯೆಗಳಾಗಿವೆ. ಇವುಗಳ ಪರಿಹಾರಕ್ಕೆ ಸರ್ಕಾರ, ಸಮಾಜ ಹಾಗೂ ಯುವಜನರು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ವರ್ಗಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇತರ ಭಾಷೆಗಳನ್ನು ಗೌರವಿಸುವುದರೊಂದಿಗೆ ಕನ್ನಡದ ಸ್ವಾಭಿಮಾನ, ಭಾಷಾ ವೈಶಿಷ್ಟ್ಯ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿಕೊಳ್ಳುವುದೇ ನಿಜವಾದ ಕನ್ನಡಾಭಿಮಾನವಾಗಿದೆ. ಕನ್ನಡ ನಾಡು, ನುಡಿಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಎಪಿಎಂಸಿ ಅಧ್ಯಕ್ಷ ತಿಮ್ಮಾರೆಡ್ಡಿ ಭೋಗಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಕುರುಡಿ, ಮೂಕಪ್ಪ ಕಟ್ಟಿಮನಿ, ಸತ್ತಾರ್ ಬಂಗ್ಲೆವಾಲೆ, ಹಂಪಯ್ಯ ನಾಯಕ, ಕಾಮೇಶ್, ವಿಜಯಕುಮಾರ್ ಗೌಡ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



