ಮಾನ್ವಿ: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮತ್ತು ಅಭಿಮಾನ ಮೂಡಿಸಲು ರಸಪ್ರಶ್ನೆಯಂತಹ ಶೈಕ್ಷಣಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಾಸಕ ಜಿ. ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯು ಸಮೃದ್ಧ ಸಾಹಿತ್ಯ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ ನಾಡಿನ ಇತಿಹಾಸ, ಸಾಹಿತಿಗಳು, ಕವಿಗಳು ಹಾಗೂ ಕನ್ನಡದ ಸಾಧಕರ ಕುರಿತು ತಿಳಿದುಕೊಳ್ಳಬೇಕು. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಜ್ಞಾನ ವೃದ್ಧಿಸುವುದರ ಜೊತೆಗೆ ಕನ್ನಡ ನಾಡು, ನುಡಿಯ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸುತ್ತವೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸಂಕಲ್ಪ ಮಾಡುವ ದಿನವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಮುಂದಿನ ದಿನಗಳಲ್ಲಿಯೂ ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಶಾಸಕ ಹಂಪಯ್ಯ ನಾಯಕ ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸವ ನೀರಮಾನ್ವಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ತಹಶೀಲ್ದಾರ್ ಭೀಮರಾಯ ರಾಮಸಮುದ್ರ, ರಾಜಾ ಸುಭಾಷಚಂದ್ರ ನಾಯಕ, ಮಹಾಂತೇಶಸ್ವಾಮಿ ರೌಡೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ತಾಯಪ್ಪ ಹೊಸೂರು, ತಾಲೂಕು ಕಸಾಪ ಕಾರ್ಯದರ್ಶಿಗಳಾದ ಲಕ್ಷ್ಮಣ ಜಾನೇಕಲ್, ಬಾಲಾಜಿಸಿಂಗ್, ಸಂಗಮೇಶ ಮೂಧೋಳ, ಜಿ. ನಾಗರಾಜ, ಶಿಕ್ಷಕ ಬಸವರಾಜ, ರೇವಣಸಿದ್ದಯ್ಯಸ್ವಾಮಿ, ಸೈಯದ್ ಖಾಲೀದ್ ಖಾದ್ರಿ, ಮಹೆಬೂಬ್ ಮದ್ಲಾಪುರ, ಡಿ.ಜಿ. ಕರ್ಕಿಹಳ್ಳಿ, ಮೂಕಪ್ಪ ಕಟ್ಟಿಮನಿ, ಮಹ್ಮದ್ ಮುಜೀಬ್, ರಾಮು ಹೊಳೆಯಪ್ಪನವರು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.