ರಾಯಚೂರು, ನ.3: ನಗರದ ಆಶಾಪೂರ ರಸ್ತೆಯಲ್ಲಿರುವ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮಿನ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನುಸಿ ಹುಳಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನುಸಿ ಹುಳಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಬಡಾವಣೆಗಳ ನಿವಾಸಿಗಳು ಆಗ್ರಹಿಸಿದ್ದಾರೆ.

ಆಶಾಪೂರ ರಸ್ತೆಯ ಆಫೀಸರ್ ಕಾಲೋನಿ, ರಾಜಮಾತಾ ಕಾಲೋನಿ, ವಿಜಯನಗರ ಕಾಲೋನಿ, ನಜರಾಯ ಕಾಲೋನಿ, ಪದ್ಮಾವತಿ ಕಾಲೋನಿ ಹಾಗೂ ಜನತಾ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನುಸಿ ಹುಳಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದ್ದು, ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಸಂಗ್ರಹಿಸಲಾಗಿರುವ ಆಹಾರ ಧಾನ್ಯಗಳ ದಾಸ್ತಾನಿನಿಂದ ನುಸಿ ಹುಳಗಳು ಹರಡುತ್ತಿದ್ದು, ಗಾಳಿಯ ಮೂಲಕ ಸಮೀಪದ ಬಡಾವಣೆಗಳ ಮನೆಗಳಿಗೆ ಪ್ರವೇಶಿಸುತ್ತಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮನೆಯ ಅಡುಗೆ ಕೋಣೆ, ಮಲಗುವ ಕೋಣೆ, ಪೀಠೋಪಕರಣಗಳು ಸೇರಿದಂತೆ ಎಲ್ಲೆಡೆ ನುಸಿ ಹುಳಗಳು ಕಾಣಿಸಿಕೊಳ್ಳುತ್ತಿವೆ. ಊಟಕ್ಕೆ ಕುಳಿತಾಗ ಆಹಾರದ ತಟ್ಟೆಯಲ್ಲಿಯೂ ನುಸಿ ಹುಳಗಳು ಬೀಳುತ್ತಿರುವುದರಿಂದ ನೆಮ್ಮದಿಯಿಂದ ಊಟ ಮಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನುಸಿ ಹುಳಗಳ ನಿರಂತರ ಹಾವಳಿಯಿಂದ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದ್ದು, ಆಹಾರ ಪದಾರ್ಥಗಳು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಅಲ್ಲದೆ, ಮಕ್ಕಳ ಹಾಗೂ ವಯೋವೃದ್ಧರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ.

ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಭಾರತೀಯ ಆಹಾರ ನಿಗಮದ ಗೋದಾಮು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಬೇಕು. ನುಸಿ ಹುಳಗಳ ಹಾವಳಿಗೆ ನಿಖರ ಕಾರಣ ಪತ್ತೆಹಚ್ಚಿ, ವೈಜ್ಞಾನಿಕ ವಿಧಾನದಲ್ಲಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಗೋದಾಮುಗಳ ಸ್ವಚ್ಛತೆ, ಆಹಾರ ಧಾನ್ಯಗಳ ಸಂಗ್ರಹಣಾ ವ್ಯವಸ್ಥೆ ಹಾಗೂ ಕೀಟ ನಿಯಂತ್ರಣ ಕಾರ್ಯಾಚರಣೆಯನ್ನು ಪರಿಶೀಲಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಮುನ್ನವೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ನಾಗೇಂದ್ರ, ನರಸಪ್ಪ, ನಾಗಭೂಷಣ, ಮದನರೆಡ್ಡಿ, ರಘು, ಸಂತೋಷ, ಸತ್ಯನಾರಾಯಣ ಹಾಗೂ ಕೆ. ಸಂತೋಷ ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.