ನಮ್ಮ ಭಾರತಭೂಮಿ ಆಧ್ಯಾತ್ಮದ ಆತ್ಮವನ್ನು ಹೊಂದಿದೆ. ಆಧ್ಯಾತ್ಮ ಎನ್ನುವುದು ತರ್ಕಗಳಿಗೆ ಅತೀತವಾದದ್ದು. ಆಧ್ಯಾತ್ಮವನ್ನು ಕೇವಲ ಘಟನೆಗಳ ಆಧಾರದ ಮೇಲೆ ನೋಡಿದಾಗ ಅದು ನಮಗೆ ಅತಿಶಯೋಕ್ತಿ ಎಂದು ತೋರುತ್ತದೆ. ಧರ್ಮಕ್ಕೆ ತನ್ನದೇ ಆದ ಸಾಂಕೇತಿಕ ಭಾಷೆ ಇದೆ. ಆ ಭಾಷೆಯ ಮೂಲಕವೇ ಧರ್ಮ ನಮಗೆ ವಿವಿಧ ರೀತಿಯ ಸಂಜ್ಞೆಗಳನ್ನು ನೀಡುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು ಅಷ್ಟೇ.

ಬಹಳಷ್ಟು ಬಾರಿ ನಮ್ಮ ಯುವಜನಾಂಗ ಈ ರೀತಿಯ ಸಂಜ್ಞಾ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೆ ಅನ್ಯರ ಪ್ರಭಾವಕ್ಕೆ ಒಳಗಾಗಿಯೋ ಅಥವಾ ತಮ್ಮದೇ ತಪ್ಪು ತಿಳುವಳಿಕೆಗಳಿಂದಾಗಿಯೋ ನಮ್ಮ ಸನಾತನ ಧರ್ಮದ ಸಂಕೇತಗಳನ್ನು ಪ್ರಶ್ನಿಸುತ್ತಾರೆ. ಕೆಲವು ವಿಷಯಗಳು ನಮ್ಮ ಅರಿವಿಗೆ ನಿಲುಕುವುದಿಲ್ಲ ಎಂಬ ಕಾರಣಕ್ಕೆ ಅವು ಅರ್ಥವಿಲ್ಲದ ಆಚರಣೆಗಳಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಒಂದು ಪುಟ್ಟ ಕಥೆಯನ್ನು ಹೇಳುತ್ತೇನೆ. ಬಹುಶಃ ಆ ಕಥೆಯಲ್ಲಿ ನಮ್ಮ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಸುರಲೋಕದ ಒಡೆಯ ಇಂದ್ರನು ಗೋಕುಲವಾಸಿಗಳ ದೈವವಾಗಿದ್ದನು. ಪ್ರತಿವರ್ಷವೂ ನಿಗದಿತ ದಿನದಂದು ಇಂದ್ರದೇವನನ್ನು ಪೂಜಿಸುತ್ತಿದ್ದ ಗೋಕುಲವಾಸಿಗಳನ್ನು ಬಾಲಕ ಕೃಷ್ಣನು ಇಂದ್ರದೇವನನ್ನು ಪೂಜಿಸಲು ಕಾರಣವೇನೆಂದು ಕೇಳಿದನು. ಇದಕ್ಕೆ ಉತ್ತರವಾಗಿ ಗೋಕುಲವಾಸಿಗಳು, ಇಂದ್ರದೇವನ ಕೃಪೆಯಿಂದಲೇ ನಮಗೆ ಕಾಲಕಾಲಕ್ಕೆ ಮಳೆಯಾಗುತ್ತದೆ. ತನ್ಮೂಲಕ ನಮ್ಮ ಹಸುಗಳಿಗೆ ಪುಷ್ಕಳವಾದ ಗೋಗ್ರಾಸ ದೊರೆಯುತ್ತದೆ ಎಂದು ಉತ್ತರಿಸಿದರು. ಜೊತೆಗೆ ಪ್ರತಿವರ್ಷವೂ ಇಂದ್ರದೇವನನ್ನು ಪೂಜಿಸದಿದ್ದರೆ ಆತ ಕೋಪಗೊಳ್ಳುತ್ತಾನೆ. ಪರಿಣಾಮವಾಗಿ ಬರ ಆವರಿಸಬಹುದು ಎಂದು ಹೇಳಿದರು.

ಆಗ ಪುಟ್ಟ ಬಾಲಕ ಕೃಷ್ಣನು, ನಮಗೆ ನೀರು, ಆಹಾರ, ಗಾಳಿ, ಬೆಳಕು, ಹಸಿರು ಎಲ್ಲವನ್ನೂ ನೀಡುವುದು ಪಂಚಮಹಾಭೂತಗಳು. ಅವು ಸೃಷ್ಟಿಯಲ್ಲಿವೆ. ಆದ್ದರಿಂದ ನಾವು ದೂರದ ದೇವಲೋಕದಲ್ಲಿರುವ ಇಂದ್ರದೇವನನ್ನು ಪೂಜಿಸುವುದಕ್ಕಿಂತ ನಮ್ಮ ಕಣ್ಣಮುಂದಿರುವ ಸೃಷ್ಟಿಯನ್ನು ಆರಾಧಿಸಬೇಕು. ಆ ಸೃಷ್ಟಿಯ ಸಂಕೇತವಾದ ಗೋವರ್ಧನಗಿರಿಯನ್ನು, ಅಲ್ಲಿಯ ಹಸಿರು ವನಸಿರಿಯಲ್ಲಿರುವ ಗಿಡಮೂಲಿಕೆಗಳನ್ನು ಹಾಗೂ ಸದಾಕಾಲ ಮಳೆ ಸುರಿಯಲು ಅನುಕೂಲಕರ ವಾತಾವರಣ ನಿರ್ಮಿಸುವ ಅಲ್ಲಿಯ ಸಕಲ ವೃಕ್ಷಸಂಪತ್ತನ್ನು ಪೂಜಿಸಬೇಕು ಎಂದು ಹೇಳಿದನು.

ಗೋಕುಲವಾಸಿಗಳಿಗೆ ಕೃಷ್ಣನ ಈ ಮಾತು ಒಪ್ಪಿಗೆಯಾಯಿತು. ಅಂತೆಯೇ ಅವರೆಲ್ಲರೂ ಸೇರಿ ಆ ವರ್ಷ ಮನೆಯಲ್ಲಿ ಎಲ್ಲ ಬಗೆಯ ಅಡುಗೆಗಳನ್ನು ತಯಾರಿಸಿ, ಅವುಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಗೋವರ್ಧನಗಿರಿಗೆ ಹೋದರು. ಇಂದ್ರನ ಬದಲಾಗಿ ಗೋವರ್ಧನಗಿರಿಯನ್ನು ಪೂಜಿಸಿ, ಆರಾಧಿಸಿ ನೈವೇದ್ಯವನ್ನು ಅರ್ಪಿಸಿದರು. ನಂತರ ತಾವು ಕೂಡ ಉಂಡುಟ್ಟು ಸಂತಸದಿಂದ ನಲಿದರು.

ಗೋಕುಲವಾಸಿಗಳ ಈ ಕ್ರಿಯೆ ಇಂದ್ರನಿಗೆ ಕೋಪ ತರಿಸಿತು. ತನ್ನನ್ನು ಪೂಜಿಸುತ್ತಿದ್ದ ಗೋಕುಲವಾಸಿಗಳು ತನ್ನ ಬದಲಾಗಿ ಗೋವರ್ಧನಗಿರಿಯನ್ನು ಪೂಜಿಸಿದ್ದು ಆತನ ಅಹಂಕಾರಕ್ಕೆ ಪೆಟ್ಟು ಬಿದ್ದಂತೆ ಭಾಸವಾಯಿತು. ಪರಿಣಾಮವಾಗಿ ಗೋಕುಲವಾಸಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ನಿಶ್ಚಯಿಸಿದ ಆತ ಕುಂಭದ್ರೋಣ ಮಳೆಯನ್ನು ಸುರಿಸಿದನು.

ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮವಾಗಿ ಗೋಕುಲವಾಸಿಗಳು ಸಂಕಷ್ಟಕ್ಕೆ ಸಿಲುಕಿದರು. ಒಂದೇ ಸಮನೆ ಮಳೆ ಸುರಿಯುತ್ತಿದ್ದ ಕಾರಣ ಅವರ ಗೋವುಗಳು ಹಾಗೂ ಅವರು ಕೂಡ ಮಳೆಯಲ್ಲಿ ಸಿಲುಕಿಕೊಂಡರು. ಅವರ ಮನೆಗಳಲ್ಲಿ ನೀರು ತುಂಬಿತ್ತು. ರಕ್ಷಣೆಗಾಗಿ ಅವರೆಲ್ಲರೂ ಶ್ರೀಕೃಷ್ಣನ ಮೊರೆ ಹೋದರು. ಆಗ ಪುಟ್ಟ ಬಾಲಕನಾದ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತಿಹಿಡಿದು, ಅದರ ಕೆಳಗೆ ಇಡೀ ಗೋಕುಲವಾಸಿಗಳಿಗೆ ರಕ್ಷಣೆ ನೀಡಿದನು.

ಕೇವಲ ಏಳು ವರ್ಷದ ಬಾಲಕ ಕೃಷ್ಣನು ಅದು ಹೇಗೆ ಭಾರಿ ಪರ್ವತವನ್ನು ಎತ್ತಿದನು ಎಂದು ಕೇಳುವ ಪ್ರಶ್ನೆಗೆ ಇಲ್ಲಿ ಉತ್ತರ ಸಿಗಬಹುದು.

ಪರ್ವತವನ್ನು ಎತ್ತುವುದು ಕೇವಲ ಕೃಷ್ಣನ ಶಕ್ತಿ ಸಾಮರ್ಥ್ಯವನ್ನು ತೋರಿಸುವುದಿಲ್ಲ. ರೂಢಿಗತವಾಗಿ ನಡೆದುಬಂದ ಪರಂಪರೆಗಳನ್ನು ಹಾಗೂ ಅಂಧವಿಶ್ವಾಸವನ್ನು ಪ್ರಶ್ನಿಸುವ ಮತ್ತು ಅವುಗಳನ್ನು ತಿರಸ್ಕರಿಸುವ ಧೈರ್ಯವನ್ನು ತೋರುವುದು ಕೂಡ ಪರ್ವತವನ್ನು ಎತ್ತಿದಷ್ಟೇ ಬಲಾಢ್ಯವಾದ ಕಾರ್ಯವಾಗಿದೆ. ಕೃಷ್ಣನು ಅಂತಹ ಒಂದು ಜವಾಬ್ದಾರಿಯನ್ನು ಹೊತ್ತನು.

ಪರ್ವತವನ್ನು ಎತ್ತಿದಷ್ಟೇ ಸಹಜವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಆತ ರೂಢಿಗತವಾಗಿ ನಡೆದುಬಂದ ಪರಂಪರೆಯನ್ನು ಪ್ರಶ್ನಿಸುವ ಕೆಲಸವನ್ನು ಮಾಡಿದನು.

ದೇವರಿಗೆ ಭಯಪಡದಿದ್ದರೆ ಆತನನ್ನು ಪೂಜಿಸುವುದಾದರೂ ಹೇಗೆ ಎಂಬ ಸನಾತನವಾದಿಗಳ ವಾದವನ್ನು ಖಂಡಿಸಿದ ಇದರ ಅರ್ಥ, ಧರ್ಮದ ಕೆಲಸ ಭಯವನ್ನು ಹುಟ್ಟಿಸುವುದಲ್ಲ. ಧರ್ಮದ ಕೆಲಸ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಹಾಗೂ ಸರಿಯಾದ ದಾರಿಯನ್ನು ತೋರಿಸುವುದಾಗಿದೆ.

ಇದರಲ್ಲಿ ಭಕ್ತಿ ಕೃತಜ್ಞತೆಯ ರೂಪದಲ್ಲಿ ಇರಬೇಕೇ ಹೊರತು ಭಯದಿಂದ ಮೂಡಿದ್ದಾಗಿರಬಾರದು ಎಂಬುದನ್ನು ನಾವು ಅರಿತುಕೊಳ್ಳಬೇಕು.

ಏನಂತೀರಾ ಸ್ನೇಹಿತರೇ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ.