ದೇವದುರ್ಗ: ಪಂಚರ್ ಅಂಗಡಿ ನಡೆಸುತ್ತಲೇ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಮಗನನ್ನು ವೈದ್ಯಕೀಯ ಶಿಕ್ಷಣಕ್ಕೆ ಸೇರಿಸಿರುವ ಪಟ್ಟಣದ ಭಗತ್ ಸಿಂಗ್ ಓಣಿಯ ನರಸಿಂಗರಾವ್ ಉತ್ತಪ್ಪ ಸರೋದೆ ಅವರ ಪರಿಶ್ರಮವನ್ನು ಗುರುತಿಸಿ ರಾಯಚೂರಿನ ಕಲಾ ಸಂಕುಲ ಸಂಸ್ಥೆಯು ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ನವೆಂಬರ್ 8ರಂದು ರಾಯಚೂರಿನ ರಂಗಮಂದಿರದಲ್ಲಿ ನಡೆಯಲಿರುವ ದೇಸೀ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
1983ರ ಮೇ 28ರಂದು ಕಿರಾಣಿ ವ್ಯಾಪಾರಿ ಉತ್ತಪ್ಪ ಸರೋದೆ ಹಾಗೂ ಕಲಾವತಿ ದಂಪತಿಯ ಒಂಬತ್ತು ಮಕ್ಕಳ ಕುಟುಂಬದಲ್ಲಿ ನಾಲ್ಕನೇ ಮಗನಾಗಿ ಜನಿಸಿದ ನರಸಿಂಗರಾವ್, ಬಡತನದ ನಡುವೆಯೇ ಬಿ.ಎ. ಪದವಿ ಪೂರ್ಣಗೊಳಿಸಿದರು. ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮುಂದುವರಿಸಲಾಗದಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಂಕಲ್ಪ ಮಾಡಿದರು.
1999ರಲ್ಲಿ ಅಣ್ಣನ ಪಂಚರ್ ಅಂಗಡಿಯಲ್ಲಿ ಕೆಲಸ ಆರಂಭಿಸಿದ ಅವರು, ಅನೇಕ ಸಂಕಷ್ಟಗಳನ್ನು ಎದುರಿಸಿ ಸ್ವಂತ ‘ಚಂದ್ರು ಪಂಚರ್ ಅಂಗಡಿ’ ಸ್ಥಾಪಿಸಿದರು. ಹಗಲಿರುಳು ದುಡಿದು ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರು, ಕಾಯಕನಿಷ್ಠೆಯಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ.
2008ರಲ್ಲಿ ವಸಂತ ಅವರೊಂದಿಗೆ ವಿವಾಹವಾದ ನರಸಿಂಗರಾವ್ ಅವರಿಗೆ ಅಕ್ಷಯ ಹಾಗೂ ಅಕ್ಷರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಪುತ್ರ ಅಕ್ಷಯ ನರಸಿಂಗರಾವ್ ಸರೋದೆ ಕೊಪ್ಪಳದ ಕಿಮ್ಸ್ನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದು, ಪುತ್ರಿ ಅಕ್ಷರಾ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಸಹೋದರರಾದ ವೆಂಕಟೇಶ, ಚಂದ್ರಕಾಂತ, ಮಹಾಂತೇಶ, ಲೋಹಿತ್ ಹಾಗೂ ಕುಟುಂಬದ ಇತರ ಸದಸ್ಯರ ಸಹಕಾರವೂ ಇವರ ಸಾಧನೆಗೆ ಬೆಂಬಲವಾಗಿದೆ.
ಪಂಚರ್ ಅಂಗಡಿಯ ದುಡಿಮೆಯಿಂದಲೇ ಮಗನ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುತ್ತಿರುವ ನರಸಿಂಗರಾವ್ ಅವರ ಕಾಯಕನಿಷ್ಠೆ, ಕುಟುಂಬದ ಮೇಲಿನ ಕಾಳಜಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ತೋರಿದ ತ್ಯಾಗವನ್ನು ಗುರುತಿಸಿ ಕಲಾ ಸಂಕುಲ ಸಂಸ್ಥೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಾಮಾನ್ಯ ವೃತ್ತಿಯಲ್ಲಿಯೂ ಅಸಾಮಾನ್ಯ ಸಾಧನೆ ಮಾಡಬಹುದೆಂಬುದಕ್ಕೆ ನರಸಿಂಗರಾವ್ ಅವರ ಬದುಕು ಮಾದರಿಯಾಗಿದ್ದು, ಅವರ ಸಾಧನೆಗೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.



