ಮಕ್ಕಳೇ ದೇಶದ ಭವಿಷ್ಯ. ಅವರ ನಗು, ಕನಸು, ಪ್ರತಿಭೆ ಹಾಗೂ ಸಾಧನೆಗಳಲ್ಲಿಯೇ ನಾಳಿನ ಭಾರತದ ಭವಿಷ್ಯ ಅಡಗಿದೆ. ಮಕ್ಕಳ ಮಹತ್ವವನ್ನು ಸಾರುವ ಹಾಗೂ ಅವರ ಹಕ್ಕುಗಳು ಮತ್ತು ಕಲ್ಯಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಹಾಗೂ ಆಧುನಿಕ ಭಾರತದ ಶಿಲ್ಪಿ ಎಂದೇ ಪ್ರಸಿದ್ಧರಾದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ನೆಹರು ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು. ಆದ್ದರಿಂದ ಮಕ್ಕಳು ಅವರನ್ನು ಪ್ರೀತಿಯಿಂದ ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು. ಅವರ ನಿಧನದ ನಂತರ 1964ರಿಂದ ಭಾರತದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಮಕ್ಕಳು ಸಮಾಜದ ಅಮೂಲ್ಯ ಸಂಪತ್ತು. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ, ಸ್ವಾತಂತ್ರ್ಯ, ಪ್ರೀತಿ, ಗೌರವ ಹಾಗೂ ಸುರಕ್ಷಿತ ವಾತಾವರಣ ದೊರೆಯಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮತ್ತು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಮಕ್ಕಳ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಅತಿಯಾದ ಮೊಬೈಲ್ ಬಳಕೆಯೂ ಒಂದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಓದು, ಏಕಾಗ್ರತೆ ಮತ್ತು ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಕ್ಕಳು ಮೊಬೈಲ್ ಬಳಕೆಯಲ್ಲಿಯೇ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಆದ್ದರಿಂದ ಪಾಲಕರು ಮಕ್ಕಳಿಗೆ ಮೊಬೈಲ್ ಬಳಕೆಯ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು. ತಂತ್ರಜ್ಞಾನವು ಮಕ್ಕಳ ಜ್ಞಾನವನ್ನು ವೃದ್ಧಿಸುವ ಸಾಧನವಾಗಬೇಕೇ ಹೊರತು, ಅವರ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗಬಾರದು. ಮಕ್ಕಳಲ್ಲಿ ಓದುವ ಹವ್ಯಾಸ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸೃಜನಶೀಲ ಆಸಕ್ತಿಗಳನ್ನು ಬೆಳೆಸುವುದು ಅಗತ್ಯವಾಗಿದೆ.
ಮಕ್ಕಳ ಮೇಲಿನ ದೌರ್ಜನ್ಯವೂ ಸಮಾಜ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಗೌರವದ ವಿಷಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರತಿಯೊಂದು ಹೆಣ್ಣುಮಗುವೂ ಹುಟ್ಟಿನಿಂದಲೇ ಪ್ರೀತಿ, ಗೌರವ, ಸ್ವಾತಂತ್ರ್ಯ ಮತ್ತು ಸುರಕ್ಷತೆಗೆ ಅರ್ಹವಾಗಿದೆ.
ಕೆಲವು ಹೆಣ್ಣುಮಕ್ಕಳು ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಮಾಜದ ವಿವಿಧ ಹಂತಗಳಲ್ಲಿ ಕಿರುಕುಳ ಮತ್ತು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇಂತಹ ಘಟನೆಗಳು ಅವರ ಆತ್ಮವಿಶ್ವಾಸ, ಶಿಕ್ಷಣ ಮತ್ತು ಭವಿಷ್ಯದ ಕನಸುಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಹಾಗೂ ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗುವುದು ಖಂಡನೀಯವಾಗಿದೆ.
ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಂದು ಮಗುವಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಹೆಣ್ಣುಮಗುವನ್ನು ಕುಟುಂಬದ ಹೊರೆ ಎಂದು ಭಾವಿಸದೆ, ಆಕೆಯ ಕನಸುಗಳಿಗೆ ಬೆಂಬಲವಾಗಿ ನಿಲ್ಲಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು.
ಪಾಲಕರು ತಮ್ಮ ಆಸೆ ಮತ್ತು ನಿರೀಕ್ಷೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಬದಲಾಗಿ ಅವರ ಆಸಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಕೇವಲ ಉತ್ತಮ ಶಿಕ್ಷಣ ನೀಡಿದರೆ ಸಾಲದು; ಅವರಲ್ಲಿ ಮಾನವೀಯತೆ, ಉತ್ತಮ ಸಂಸ್ಕಾರ, ಆತ್ಮವಿಶ್ವಾಸ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸಬೇಕು.
ಮಕ್ಕಳ ದಿನಾಚರಣೆ ಎಂದರೆ ಕೇವಲ ಸಿಹಿ ಹಂಚುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಥವಾ ಶುಭಾಶಯಗಳನ್ನು ತಿಳಿಸುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ, ಉತ್ತಮ ಶಿಕ್ಷಣ ಮತ್ತು ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ಅವಕಾಶ ದೊರೆಯುವಂತೆ ಮಾಡುವ ಸಂಕಲ್ಪದ ದಿನವಾಗಬೇಕು.
ಮಕ್ಕಳು ದೇವರು ನೀಡಿದ ಅಮೂಲ್ಯ ಕೊಡುಗೆ. ಅವರ ಬಾಲ್ಯವನ್ನು ಕಸಿದುಕೊಳ್ಳದೆ, ಅವರ ಕನಸುಗಳಿಗೆ ರೆಕ್ಕೆ ನೀಡಬೇಕು. ಪ್ರತಿಯೊಂದು ಮಗುವಿನ ಮುಖದಲ್ಲೂ ನಗು ಮೂಡಿದಾಗ, ಪ್ರತಿಯೊಂದು ಮಗುವೂ ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಾಣವಾದಾಗ ಮಾತ್ರ ಮಕ್ಕಳ ದಿನಾಚರಣೆಗೆ ನಿಜವಾದ ಅರ್ಥ ದೊರೆಯುತ್ತದೆ.
ಮಕ್ಕಳನ್ನು ಪ್ರೀತಿಸೋಣ, ಅವರ ಹಕ್ಕುಗಳನ್ನು ಗೌರವಿಸೋಣ ಹಾಗೂ ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲೋಣ. ಏಕೆಂದರೆ ಇಂದಿನ ಮಕ್ಕಳೇ ನಾಳಿನ ಭಾರತದ ಭರವಸೆಗಳು.
— ಕು. ಸಂಗೀತ ವಿರೂಪಾಕ್ಷ ಎನ್ಎಸ್ಎಸ್ ಸ್ವಯಂಸೇವಕಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಯಚೂರು.



