ಮಾನವ ಜನ್ಮದ ಸಾರ್ಥಕತೆ ಮೌಲ್ಯಯುತ ಜೀವನವನ್ನು ನಡೆಸುವುದರಿಂದ ಮಾತ್ರ ರೂಪುಗೊಳ್ಳಬಲ್ಲದು. ಪ್ರತಿಯೊಬ್ಬರಿಗೂ ಸಾಧನೆಯ ಮೆಟ್ಟಿಲೇರುವ ವಿಪುಲ ಅವಕಾಶಗಳಿದ್ದರೂ ಸಾಧನೆಯನ್ನು ಸಾಧ್ಯವಾಗಿಸಿಕೊಂಡವರು ಕೆಲವರು ಮಾತ್ರ. ಇಂತಹ ಸಾರ್ಥಕ ಬದುಕನ್ನು ಕಟ್ಟಿಕೊಂಡು ಮೌಲ್ಯಯುತ ಜೀವನ ನಡೆಸಿದ ವ್ಯಕ್ತಿಗಳ ಜೀವನದ ಪ್ರಮುಖ ಘಟನೆಗಳನ್ನು ಬರಹದಲ್ಲಿ ಸೆರೆಹಿಡಿದು ಚಿತ್ರಿಸುವ ಕನ್ನಡ ಸಾಹಿತ್ಯದ ವ್ಯಕ್ತಿಚಿತ್ರ ಪ್ರಕಾರದಲ್ಲಿ ಶ್ರೀ ರಾಮಣ್ಣ ಹವಳೆ ಅವರ ಜೀವನದ ಸ್ಥೂಲ ವಿಚಾರಗಳನ್ನು ಬರೆಯುವ ಪ್ರಯತ್ನ ಮಾಡಿರುವೆ.
ಪ್ರಸ್ತುತ ನವೆಂಬರ್ 14 ಮತ್ತು 15, 2026ರಂದು ನಡೆಯಲಿರುವ ನಮ್ಮ ರಾಯಚೂರು ಜಿಲ್ಲೆಯ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ರಾಮಣ್ಣ ಹವಳೆಯವರು 86 ವರ್ಷಗಳ ಸಾರ್ಥಕ ಬದುಕಿನ ಸಾಧಕರು.
ಶಿಕ್ಷಕರು, ಸಂಶೋಧಕರು, ವಿದ್ವಾಂಸರಾಗಿ ಸೇವೆಗೈದ ನಿಸ್ಪೃಹ, ನಿರಾಡಂಬರ ಜೀವಿಗಳು. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ವಿದ್ಯೆಯನ್ನು ಧಾರೆಯೆರೆದ ಅವರ ಕರ್ತೃತ್ವ ಶಕ್ತಿ, ಸಂಘಟನಾ ಸಾಮರ್ಥ್ಯ, ಅಪೂರ್ವ, ಅರ್ಥಪೂರ್ಣ, ಚಿಂತನಶೀಲ ಸ್ವೋಪಜ್ಞತೆಯುಳ್ಳ ಗುಣಗ್ರಾಹಿ ವ್ಯಕ್ತಿತ್ವ ಅನುಕರಣೀಯ. ಇವರ ಸಜ್ಜನಿಕೆ, ಪ್ರಾಮಾಣಿಕತೆ, ಕ್ರಿಯಾಶೀಲತೆ, ವೈಚಾರಿಕ ಮನೋಭಾವ, ಸಾಮಾಜಿಕ ಕಾಳಜಿ ಹಾಗೂ ಶೈಕ್ಷಣಿಕ ಶಿಸ್ತು ಮಾದರಿಯಾಗಿವೆ.
ಬಾಲ್ಯದಿಂದ ಬೆಳವಣಿಗೆಯತ್ತ
86 ವಸಂತಗಳ ಬದುಕಿನ ಪಯಣದಲ್ಲಿರುವ ಶ್ರೀಯುತರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದವರು. 1941ರ ಫೆಬ್ರವರಿ 2ರಂದು ಕಿನ್ನಾಳದಲ್ಲಿ ತಂದೆ ನರಸಪ್ಪ ಹವಳೆ ಮತ್ತು ತಾಯಿ ಪಾರ್ವತಮ್ಮ ಅವರ ಮೂರನೇ ಮಗನಾಗಿ ಜನಿಸಿದರು. ಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ, ಪಿಯುಸಿ ಶಿಕ್ಷಣವನ್ನು ಎಲ್ವಿಡಿ ಮಹಾವಿದ್ಯಾಲಯದಲ್ಲಿ, ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಹಾಗೂ ಕನ್ನಡ ವಿಷಯದಲ್ಲಿ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಮೈಸೂರಿನ ರಾಮಕೃಷ್ಣ ಆಶ್ರಮ ಸಂಸ್ಥೆಯಿಂದ ನೈತಿಕ ಮತ್ತು ಆಧ್ಯಾತ್ಮಿಕ ವಿಷಯದಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದ ಇವರು ಜೀವನಕ್ಕೆ ಲೌಕಿಕ ಮತ್ತು ಆಧ್ಯಾತ್ಮಿಕತೆಯ ಸ್ಪರ್ಶ ನೀಡಿದರು.
ಬದುಕಿನ ಮತ್ತೊಂದು ಹೆಜ್ಜೆಯಾಗಿ 1962ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಮುನ್ನೂರುವಾಡಿ ಶಾಲೆಗೆ ನೇಮಕಗೊಂಡು ರಾಯಚೂರಿಗೆ ಬಂದರು. 1962ರಿಂದ 1999ರವರೆಗೆ ಶಿಕ್ಷಕರಾಗಿ, ಪ್ರೌಢಶಾಲಾ ಅಧ್ಯಾಪಕರಾಗಿ, ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆದು ಸೇವೆಗೈದ ಶ್ರೀಯುತರು, 2001ರಿಂದ 2013ರವರೆಗೆ ರಾಯಚೂರು ಮುನ್ನೂರು ಕಾಪು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಹಾಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರಾಗಿ ಸವಾಲುಗಳು ಮತ್ತು ಸಾಧನೆಗಳು
ರಾಮಣ್ಣ ಹವಳೆಯವರು ಆಕಾಶವಾಣಿ ಸಂದರ್ಶನದಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಮಾತುಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ರಾಯಚೂರಿನ ಮುನ್ನೂರುವಾಡಿ ಶಾಲೆಗೆ ಶಿಕ್ಷಕರಾಗಿ ಬಂದಾಗ ಕೊಠಡಿ, ಕುರ್ಚಿ, ಬೆಂಚು ಯಾವುದೂ ಇರಲಿಲ್ಲ. ಒಂದು ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿತ್ತು. ಮಕ್ಕಳಿಂದ ಎರಡು ರೂಪಾಯಿ ಸಂಗ್ರಹಿಸಿ ಬಾಡಿಗೆ ನೀಡುವ ಪರಿಸ್ಥಿತಿ ಇತ್ತು.
ಶಾಲೆಯ ಅಂದಿನ ಮುಖ್ಯಗುರುಗಳಾದ ಶ್ರೀ ಸದಾಶಿವಪ್ಪ ಅವರನ್ನು ಸ್ಮರಿಸುತ್ತಾ, ಅವರೊಂದಿಗೆ ಈ ಪರಿಸ್ಥಿತಿಯನ್ನು ಬದಲಾಯಿಸಬೇಕೆಂಬ ನಿರ್ಧಾರಕ್ಕೆ ಬಂದರು. ಜನರಲ್ಲಿ ಜಾಗೃತಿ ಮೂಡಿಸಲು ಗಣೇಶ ಚತುರ್ಥಿ ಆಚರಣೆಗೆ ಮುಂದಾದರು. ರಾಯಚೂರಿನಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಪರಂಪರೆ ಅಂದಿನಿಂದ ಆರಂಭವಾಯಿತು. ವಿಶಾಲವಾದ ಅಂಗಳದಲ್ಲಿ ಸಾವಿರಾರು ಜನರ ಮಧ್ಯೆ ಆಚರಿಸಲಾಯಿತು. ಜನರಿಂದ ಎರಡು ರೂಪಾಯಿ ಸಂಗ್ರಹಿಸಲಾಯಿತು.
ಈ ಗಣೇಶೋತ್ಸವದಲ್ಲಿ ‘ಶಾರದಾದೇವಿ’ ನಾಟಕವನ್ನು ರಾಮಣ್ಣನವರು ನಿರ್ದೇಶಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆಗೂಡಿ ಅಭಿನಯಿಸಿದರು. ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾದೇವಿಯವರನ್ನು ಕೊಲ್ಲಲು ಬಂದ ವ್ಯಕ್ತಿಗೆ ಅವರು ಶಾಂತಿ ಬೋಧಿಸಿದ ಪ್ರಸಂಗವನ್ನು ನಾಟಕದ ವಸ್ತುವಾಗಿಟ್ಟುಕೊಂಡು ಅತ್ಯದ್ಭುತವಾಗಿ ಪ್ರದರ್ಶಿಸಲಾಯಿತು. ನೆರೆದ ಜನಸ್ತೋಮ ನಾಟಕಕ್ಕೆ ಮನಸೋತಿತು.
ಅಲ್ಲದೆ, ಗಂಗಾನಗರದ ಸ್ವಾತಂತ್ರ್ಯ ಹೋರಾಟಗಾರರಾದ ನಾಗಣ್ಣನವರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಲು ಖರ್ಚುವೆಚ್ಚ ನೀಡುವುದಾಗಿ ಮುಂದೆ ಬಂದರು. ಅದಕ್ಕೆ ರಾಮಣ್ಣನವರು ಖರ್ಚು ಕೊಡುವುದಕ್ಕಿಂತ ಶಾಲೆಯ ಕಟ್ಟಡ ಕಟ್ಟಿಸಲು ನೆರವಾಗುವಂತೆ ಒತ್ತಾಯಿಸಿದರು. ಇದು ಶಾಲೆಯ ನಿರ್ಮಾಣಕ್ಕೆ ತಳಹದಿಯಾಯಿತು.
ಅವರ ಸಹಕಾರದೊಂದಿಗೆ 1970ರ ವೇಳೆಗೆ ಶಾಲೆ ನಿರ್ಮಾಣಗೊಂಡಿತು. ಶ್ರದ್ಧೆಯಿಂದ ಹಣ ಸಂಗ್ರಹಿಸಿ ಎಂಟು ಕೊಠಡಿಗಳ ಶಾಲೆ ನಿರ್ಮಿಸಲಾಯಿತು. ಆ ಸಂದರ್ಭದಲ್ಲಿ ನಗರಸಭೆ ಸದಸ್ಯರಾಗಿದ್ದ ಡಾ. ಸಂಗಮೇಶ ಸರದಾರ ಅವರು ಶಾಲೆಗೆ ಜಾಗ ನೀಡಿದ್ದನ್ನು ರಾಮಣ್ಣನವರು ಸ್ಮರಿಸುತ್ತಾರೆ. ಇಂದು ಆ ಶಾಲೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಪುಣ್ಯನೆಲವಾಗಿದೆ.
1947ರ ಗೆಜೆಟಿಯರ್ ದಾಖಲೆ ಪ್ರಕಾರ ನಮ್ಮ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 9ರಿಂದ 11ರಷ್ಟಿತ್ತು. ಹೆಣ್ಣುಮಕ್ಕಳ ಸಾಕ್ಷರತಾ ಪ್ರಮಾಣ ಶೇ. 1.04ರಷ್ಟಿತ್ತು. ಅಂದಿನ ಜಿಲ್ಲಾಧಿಕಾರಿಗಳಾದ ಕೆ. ರತ್ನಪ್ರಭಾ ಅವರ ಸಹಕಾರದೊಂದಿಗೆ ಸಾಕ್ಷರತಾ ಯೋಜನೆಯನ್ನು ಜಾರಿಗೆ ತಂದರು. ಹಳ್ಳಿ ಹಳ್ಳಿಗಳಲ್ಲಿ ಶಿಕ್ಷಣದ ಜಾಗೃತಿ ಮೂಡಿಸಿ ಸಾಕ್ಷರತಾ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸಿದರು. ಆಗ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 35ರಿಂದ 45ಕ್ಕೆ ಹೆಚ್ಚಿತು.
ಐದು ವರ್ಷಗಳ ಕಾಲ ಸಾಕ್ಷರತಾ ಯೋಜನೆಯಲ್ಲಿ ಅವರೊಂದಿಗೆ ಸೇವೆಗೈದ ತೃಪ್ತಿಭಾವ ಹವಳೆಯವರಿಗಿದೆ. ಸಾಕ್ಷರತಾ ಯೋಜನೆಯ ಕಾರ್ಯಾನುಭವಗಳೇ ಇವರ ಬರಹದ ಜೀವಾಳ. ಅನುಭವಗಳನ್ನು ವಿಸ್ತರಿಸಿ ಪುಸ್ತಕಗಳನ್ನು ಬರೆಯಲು ಆರಂಭಿಸಿದರು.
ಸಾಹಿತ್ಯ ಸಂಪತ್ತು
ಒಟ್ಟು 19 ಕೃತಿಗಳನ್ನು ನೀಡಿರುವ ಶ್ರೀಯುತರು ಚರಿತ್ರೆ, ಜೀವನಚರಿತ್ರೆ, ನಾಟಕಗಳು, ಮಕ್ಕಳ ನಾಟಕಗಳು, ಅಭಿನಂದನಾ ಗ್ರಂಥಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.
ಚರಿತ್ರೆಯನ್ನು ಆಧರಿಸಿದ ಪ್ರತಿಯೊಂದು ಕೃತಿಗೂ ಪ್ರಶಸ್ತಿಗಳು ಬಂದಿವೆ ಎನ್ನುತ್ತಾರೆ. ಇದು ಅವರ ಮೌಲ್ಯಯುತ ಬರಹಕ್ಕೆ ಸಾಕ್ಷಿಯಾಗಿದೆ. ‘ರಾಯಚೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟ’ ಅವರ ನೆಚ್ಚಿನ ಕೃತಿ ಎನ್ನುತ್ತಾರೆ.
‘ಕಲಿಕೆ’ ಎಂಬ ಮಾಸಪತ್ರಿಕೆ ಇವರ ಸಂಪಾದಕತ್ವದಲ್ಲಿ ಆರಂಭಗೊಂಡಿತು.
ಡಿ.ಎಸ್.ಇ.ಆರ್.ಟಿ.ಯ 1, 2 ಮತ್ತು 3ನೇ ತರಗತಿಗಳ ಕನ್ನಡ ಪಠ್ಯಪುಸ್ತಕಗಳು ಹಾಗೂ ‘ಚೈತನ್ಯ’ ಎಂಬ ತರಬೇತಿ ಸಂಚಿಕೆ ಪ್ರಕಟವಾದವು. ಇವರು ವಿಭಾಗ ಸಮಿತಿಯ ಸದಸ್ಯರಾಗಿದ್ದರು.
1ರಿಂದ 7ನೇ ತರಗತಿಯ ಮಕ್ಕಳ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಎಂಟು ವರ್ಷಗಳ ಕಾಲ ಸೇವೆಗೈದರು.
ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಹಾಗೂ 6ನೇ ತರಗತಿಯ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿ ಮಕ್ಕಳ ಮನಮುಟ್ಟುವಂತೆ ಪುಸ್ತಕಗಳನ್ನು ರಚಿಸಿ ನೀಡಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯಿತಿಯಿಂದ ಪ್ರಕಟವಾಗುತ್ತಿದ್ದ ‘ಪಂಚಾಯತ್ ರಾಜ್’ ಪತ್ರಿಕೆಯ ಸಂಪಾದಕರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ.
ಪ್ರಮುಖ ಕೃತಿಗಳು
* ಸ್ವಾತಂತ್ರ್ಯ ಹೋರಾಟದಲ್ಲಿ ಗಜೇಂದ್ರಗಡ ಶಿಬಿರ – ಚರಿತ್ರೆ. ಇದು ಇವರ ಮೊಟ್ಟಮೊದಲ ಕೃತಿ.
* ಸ್ವಾತಂತ್ರ್ಯ ಸೇನಾನಿ ಪುಂಡಲಿಕಪ್ಪ ಜ್ಞಾನಮೋಠೆ – ಜೀವನಚರಿತ್ರೆ.
* ಡಾ. ಸಂಗಮೇಶ ಸರದಾರ – ಜೀವನಚರಿತ್ರೆ.
* ಕ್ರಾಂತಿದರ್ಶಿ, ಪರಮ ತಪಸ್ವಿ ಮುರಡಿ ಭೀಮಜ್ಜ – ಪ್ರಖಂಡ ಬ್ರಹ್ಮಚಾರಿ, ತಪಸ್ವಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಮುರಡಿ ಭೀಮಜ್ಜನವರ ಜೀವನಚರಿತ್ರೆಯನ್ನು ಆಧರಿಸಿದ ಮಹತ್ವದ ಕೃತಿ.
* ಹೈದರಾಬಾದ್ ಸಂಸ್ಥಾನ ವಿಮೋಚನೆಯಲ್ಲಿ ರಾಯಚೂರು ಜಿಲ್ಲೆಯ ಹೋರಾಟ – ಸಂಶೋಧನಾ ಗ್ರಂಥ.
* ಕೊಪ್ಪಳ ನಾಡಿನ ಸ್ವಾತಂತ್ರ್ಯ ಹೋರಾಟ – ಚಾರಿತ್ರಿಕ ಕೃತಿ.
* ಮುಂಡರಗಿ ನಾಡ ಸ್ವಾತಂತ್ರ್ಯ ಹೋರಾಟ – ವಿವಿಧ ಗಣ್ಯರು ಹಾಗೂ ಪ್ರಾಧ್ಯಾಪಕರಿಂದ ಮುಂಡರಗಿಯ ಇತಿಹಾಸವನ್ನು ಬರೆಯಿಸಿ, ಹೋರಾಟಗಾರರ ಪರಿಚಯ ಮಾಡಿಕೊಡುವ ಮಹತ್ವದ ಕೃತಿ.
ಸಂಪಾದಿತ ಕೃತಿಗಳು
* ಸಾಧಕ – ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಚಿದ್ರಿ ಶಂಕ್ರಯ್ಯ ಸ್ವಾಮಿ ಅವರ ಅಭಿನಂದನಾ ಗ್ರಂಥ.
* ಚೈತನ್ಯ – ನಿವೃತ್ತ ಶಿಕ್ಷಣ ನಿರ್ದೇಶಕರಾದ ಕೆ. ಶಾಂತಯ್ಯ ಅವರ ಆದರ್ಶ ಬದುಕಿನ ಚಿತ್ರಣ.
* ಮುನ್ನೂರು ಮುಂಗಾರು – ಮುನ್ನೂರು ಕಾಪು ಜನಾಂಗದ ಜೀವನ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸಿದ ಕೃತಿ.
* ನೆನಹು – ರಾಯಚೂರಿನ ಪ್ರಾತಿನಿಧಿಕ ಕವನಗಳ ಸಂಪಾದಿತ ಸಂಕಲನ.
* ಶಿಕ್ಷಕ ಮಾರ್ಗದರ್ಶಿ – ನಲಿ-ಕಲಿ ತರಬೇತಿ ಹಾಗೂ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿವರಣಾತ್ಮಕ ಅಂಶಗಳ ಕೃತಿ.
* ಆದರ್ಶ ಮಹಿಳೆಯರು – ಕರ್ನಾಟಕ ರಾಜ್ಯದ ಪ್ರಮುಖ ಸಾಧಕ ಮಹಿಳೆಯರ ಬದುಕು ಮತ್ತು ಅವರ ಕೊಡುಗೆಗಳನ್ನು ಚಿತ್ರಿಸಿದ ಕೃತಿ.
ನಾಟಕಗಳು
* ನಿರುದ್ಯೋಗಿ ಭೂತ
* ಏಕಲವ್ಯ – ಮಕ್ಕಳಿಗಾಗಿ ಬರೆದ ನಾಟಕ.
* ಅಲ್ಲಮನ ಅಂಗಳದಲ್ಲಿ
‘ಮಕ್ಕಳ ರಾಮಾಯಣ ಕಥೆ’ಯು ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಯನ್ನು ಆಧರಿಸಿದ ಕಥೆಯಾಗಿದ್ದು, 1989ರಲ್ಲಿ ‘ಸುದ್ದಿಮೂಲ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಯಾವುದೇ ಪೂರ್ವಗ್ರಹ, ಕಲ್ಪನೆ, ಉದ್ವೇಗ ಹಾಗೂ ಒತ್ತಡಗಳಿಗೆ ಒಳಗಾಗದೆ ಸತ್ಯ ಮತ್ತು ವಸ್ತುನಿಷ್ಠ ವಿಷಯಗಳನ್ನು ನಿಖರವಾಗಿ ನಿರೂಪಿಸಿದ ಹೆಮ್ಮೆ ಇವರದ್ದಾಗಿದೆ.
ಸಾಮಾಜಿಕ ಚಿಂತಕರಾಗಿ
ವೃತ್ತಿಯಿಂದ ನಿವೃತ್ತಿಗೊಂಡ ನಂತರ ಸಂಪೂರ್ಣವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ರಾಮಣ್ಣ ಹವಳೆಯವರು ನಿವೃತ್ತ ನೌಕರರ ಸಂಘವನ್ನು ಸಂಘಟಿಸಿ, ಅದರ ಉಪಾಧ್ಯಕ್ಷರಾಗಿ 2011ರಿಂದ ಇಂದಿನವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೃತ್ತ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ನಿರಂತರವಾಗಿ ನಡೆಸಿದ್ದಾರೆ. ಹಿರಿಯ ನಾಗರಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ವಿಭಾಗ ಮಟ್ಟದಲ್ಲಿ ನಿವೃತ್ತ ನೌಕರರ ಸಮ್ಮೇಳನ ನಡೆಸಿದ ಯಶಸ್ಸು ಇವರದ್ದಾಗಿದೆ.
ರಾಜ್ಯ ಮತ್ತು ರಾಷ್ಟ್ರ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರತಿವರ್ಷ ಜನಪರ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಪರಂಪರೆ ಬೆಳೆಸಿದ್ದಾರೆ.
ಗೌರವ ಪ್ರಶಸ್ತಿ – ಪುರಸ್ಕಾರಗಳು
ಪ್ರಶಸ್ತಿಗಳು ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವವನ್ನು ಅಳೆಯುವುದಿಲ್ಲ. ಅವರ ಬದುಕು ಮತ್ತು ಬರಹ ಒಂದಾಗಿ ಸಮಾಜಕ್ಕೆ ಪೂರಕವಾದರೆ, ಅಭಿವೃದ್ಧಿಗೆ ಬೆಳಕಾದರೆ ಮಾತ್ರ ಆ ಪ್ರಶಸ್ತಿಗೂ, ಅದನ್ನು ಪಡೆದ ವ್ಯಕ್ತಿಗೂ ಗೌರವ. ಇಲ್ಲವಾದಲ್ಲಿ ಅದು ಕೇವಲ ಕಾಗದದಲ್ಲಿ ಮೂಡಿಸಿದ ಬರಹಕ್ಕೆ ಸೀಮಿತವಾಗುತ್ತದೆ ಎನ್ನುವುದು ಹವಳೆಯವರ ಉದಾತ್ತ ವ್ಯಕ್ತಿತ್ವದ ಮಾತುಗಳು.
ಹವಳೆಯವರು ರಚಿಸಿದ ಐತಿಹಾಸಿಕ ಕೃತಿಗಳಿಗೆ ಪ್ರಶಸ್ತಿಗಳು ಲಭಿಸಿವೆ.
ಪ್ರಮುಖವಾಗಿ:
* 1986ರಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ.
* 1990ರಲ್ಲಿ ರಾಷ್ಟ್ರ ಶಿಕ್ಷಕ ಪ್ರಶಸ್ತಿ.
* ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ.
* ‘ಹೈದರಾಬಾದ್ ಸಂಸ್ಥಾನ ವಿಮೋಚನೆಯಲ್ಲಿ ರಾಯಚೂರು ಜಿಲ್ಲೆಯ ಹೋರಾಟ’ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ.
* ಮುನ್ನೂರು ಕಾಪು ಸಮಾಜದಿಂದ 2012ರಲ್ಲಿ ಬಲಿಜ ಪ್ರಶಸ್ತಿ.
* ಜಿಲ್ಲಾ ಪುಸ್ತಕ ಸಾಕ್ಷರತಾ ರತ್ನ ಪ್ರಶಸ್ತಿ.
* ಶಿಕ್ಷಣ ಸಂಸ್ಕೃತಿ ಉತ್ಥಾನ ನ್ಯಾಸ, ನವದೆಹಲಿ ಪ್ರಶಸ್ತಿ ಫಲಕ.
* ಮುಂಡರಗಿ ಮಠ ಪ್ರತಿಷ್ಠಾನ ಪ್ರಶಸ್ತಿ.
* ಶಿಕ್ಷಣ ಸೇವೆಗೆ ಎ. ವೆಂಕಟೇಶ ನಾಯಕ ಸ್ಮರಣಾರ್ಥ ಡಾ. ರಾಜಕುಮಾರ ಪ್ರಶಸ್ತಿ.
* ಮಹಾಂತ ಶ್ರೀ ಪ್ರಶಸ್ತಿ.
* ಡಾ. ಎಸ್. ನರಸಿಂಹಯ್ಯ ಪ್ರಶಸ್ತಿ.
ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಸಾಧನೆಯ ಮುಡಿಗೇರಿವೆ.
ಸಾಹಿತ್ಯ ಮತ್ತು ಸಾಹಿತಿ
ಹವಳೆಯವರ ಅನುಭವದ ನುಡಿಗಳಲ್ಲಿ ಸಾಹಿತ್ಯ ಎಂದರೆ ಜೀವನದ ಕನ್ನಡಿ. ಅದು ಸಮಷ್ಟಿಯ ಜೀವನವನ್ನು ಒಳಗೊಳ್ಳುತ್ತದೆ. ಸಮಾಜವನ್ನು ಬಿಟ್ಟು ಸಾಹಿತಿಗಳು ಇರಲಾರರು. ಬದುಕು ಮತ್ತು ಸಾಹಿತ್ಯ ಎರಡೂ ಜೊತೆಜೊತೆಯಾಗಿ ಸಾಗುತ್ತವೆ. ಬರಹ ಕೇವಲ ಪುಸ್ತಕವಾಗಬಾರದು. ಅದೊಂದು ಸಾಹಿತ್ಯವಾಗಬೇಕು. ಅಂದಾಗ ಸಾಹಿತಿಯಾಗಲು ಸಾಧ್ಯ. ಸಾಹಿತ್ಯದಲ್ಲಿ ನಡೆ-ನುಡಿ ಒಂದಾಗಿದ್ದಾಗ ಮಾತ್ರ ಸಾಹಿತ್ಯ ಜೀವಂತವಾಗಿರಲು ಸಾಧ್ಯ.
ಬಹುತೇಕ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಧಿಗಳ ಮಾತು ಮತ್ತು ಕೃತಿ ವಿರುದ್ಧ ದಿಕ್ಕಿನಲ್ಲಿ ಸಾಗುವಂತೆ, ಸಾಹಿತಿಗಳು ಕೇವಲ ವೇದಿಕೆ, ಪ್ರತಿಷ್ಠೆ ಹಾಗೂ ಪ್ರಚಾರಕ್ಕಾಗಿ ಬರಹವನ್ನು ರೂಢಿಸಿಕೊಂಡರೆ ಸಾಹಿತಿಗಳಾಗಲಾರರು. ಅವರ ಬದುಕು ಬರಹದ ಪ್ರತಿರೂಪವಾಗಿರಬೇಕು ಎನ್ನುತ್ತಾರೆ.
ಹವಳೆಯವರ ಮಹದಾಸೆ
ಅವರ ಜೀವನದ ಆಕಾಂಕ್ಷೆಯಾಗಿ ಉಳಿದಿರುವುದು ರಾಯಚೂರು ಜಿಲ್ಲೆ ಔದ್ಯೋಗಿಕವಾಗಿ ಬೆಳೆಯಬೇಕೆಂಬುದು. ಯಾವುದೇ ಕೈಗಾರಿಕೆಗಳಿಲ್ಲದೆ, ಉದ್ಯೋಗಾವಕಾಶಗಳಿಲ್ಲದೆ ಜಿಲ್ಲೆ ತುಂಬಾ ಹಿಂದುಳಿದಿದೆ. ಹತ್ತಿ ಬೆಳೆಯುತ್ತಿದ್ದರೂ ಒಂದು ಹತ್ತಿ ಕಾರ್ಖಾನೆಯಿಲ್ಲ. ವಿದ್ಯುತ್ ಉತ್ಪಾದನೆಯಿದ್ದರೂ ಸಂಬಂಧಿತ ಕೈಗಾರಿಕೆಗಳಿಲ್ಲ.
ಜನಪ್ರತಿನಿಧಿಗಳ ನಿರಾಸಕ್ತಿ ಒಂದೆಡೆಯಾದರೆ, ಜಿಲ್ಲೆಯ ಜನತೆ ಕೇಳಲು ಬಾಯಿಲ್ಲದೆ, ನೋಡಲು ಕಣ್ಣಿಲ್ಲದವರಂತೆ ಜೀವಿಸುತ್ತಿದ್ದಾರೆ. ಪ್ರಶ್ನಿಸುವ ಧೈರ್ಯ, ಹೋರಾಟದ ಮನೋಭಾವವನ್ನು ಭಗವಂತ ನಮ್ಮ ಜಿಲ್ಲೆಯ ಜನತೆಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತಾರೆ.
ಪ್ರಸ್ತುತ ನಮ್ಮ ಜಿಲ್ಲೆಯ ಹೆಮ್ಮೆಯ ಕನ್ನಡಮ್ಮನ ಕುವರರಾಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಸಾರ್ಥಕವೆನಿಸುತ್ತದೆ. ಸಮಾಜದ ಒಡನಾಟ, ಆಡಳಿತ, ವೃತ್ತಿ ಜವಾಬ್ದಾರಿಗಳ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ ಆದರ್ಶ ಕುಟುಂಬಜೀವಿಗಳು.
ಪತ್ನಿ ಸುಮಾಬಾಯಿಯವರೊಂದಿಗೆ ಜೀವನ ಸವೆಸಿದವರು. ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ವೃದ್ಧಾಪ್ಯದ ಜೀವನವನ್ನು ಆನಂದದಿಂದ ಸಾಗಿಸುತ್ತಿದ್ದಾರೆ.
ಶ್ರೀಯುತರ ಸಾರ್ಥಕ ಬದುಕಿನ ಹೆಜ್ಜೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಬರಹ ಓದುಗರ ಮನಮುಟ್ಟಲಿ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ತಮಗೆ ಹಾರ್ದಿಕ ಅಭಿನಂದನೆಗಳು. ಭಗವಂತನ ಕೃಪೆ ಸದಾ ಇರಲಿ ಎಂದು ಆಶಿಸುತ್ತೇವೆ.
ಡಾ. ರೇಖಾ ಪಾಟೀಲ ಇತಿಹಾಸ ಉಪನ್ಯಾಸಕರು, ರಾಯಚೂರು



