ನಾವು ಎಳೆಯರು, ನಾವು ಗೆಳೆಯರು. ನಾವು ಹುಟ್ಟಿದ್ದೇವೆ, ಬದುಕುತ್ತಿದ್ದೇವೆ. ಆದರೆ ಹೇಗೆ ಬದುಕಬೇಕು ಎಂಬುದನ್ನು ಇನ್ನೂ ಕಲಿಯುತ್ತಿದ್ದೇವೆ. ಏನು ಕಲಿಯಬೇಕು, ಎಷ್ಟು ಕಲಿಯಬೇಕು ಮತ್ತು ಏಕೆ ಕಲಿಯಬೇಕು ಎಂಬುದನ್ನು ನಮಗೆ ತಿಳಿಸಿಕೊಡಬೇಕಾದವರೇ ನಮ್ಮ ಕೈಯಲ್ಲಿ ಮೊಬೈಲ್ ಕೊಟ್ಟುಬಿಟ್ಟಿದ್ದಾರೆ.
ಇದೋ ಒಂದು ದೊಡ್ಡ ಪ್ರಪಂಚ! ಇದರಲ್ಲಿ ಎಲ್ಲವೂ ಇದೆ. ಆದರೆ ನಾನು ಯಾವುದನ್ನು ತಿಳಿದುಕೊಳ್ಳಬೇಕು, ಯಾವುದನ್ನು ತಿಳಿದುಕೊಳ್ಳಬಾರದು ಎಂಬುದನ್ನು ಹೇಳಿಕೊಡುವವರು ಯಾರೂ ಇಲ್ಲ. ಇದು ನಮ್ಮ ಅದೃಷ್ಟವೋ, ದುರದೃಷ್ಟವೋ ನನಗೆ ಗೊತ್ತಿಲ್ಲ. ಈ ಮೊಬೈಲ್ ನಮಗೆ ನಿಜವಾಗಿಯೂ ಬೇಕಿತ್ತೋ, ಬೇಡವಿತ್ತೋ ಎಂಬುದೂ ತಿಳಿಯುತ್ತಿಲ್ಲ.
ನನ್ನ ಅಮ್ಮ ಹೇಳುತ್ತಾಳೆ, ‘‘ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮೊಬೈಲ್ ಇರಲಿ, ಟಿ.ವಿ. ಕೂಡ ಇರಲಿಲ್ಲ. ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದೆವು’’ ಎಂದು.
ನನ್ನ ತಂದೆಯೂ, ‘‘ನಾನು ಎಸ್ಎಸ್ಎಲ್ಸಿ ಮುಗಿಸುವವರೆಗೂ ನಮ್ಮ ಮನೆಗೆ ಟಿ.ವಿ. ತಂದಿರಲಿಲ್ಲ. ಓದಿಕೊಳ್ಳಲು ಗೆಳೆಯರ ಮನೆಗೆ ಹೋಗುತ್ತಿದ್ದೆ. ಆಟವಾಡಲು ಅಂಗಳಕ್ಕೆ ಬರುತ್ತಿದ್ದೆ’’ ಎಂದು ಹೇಳುತ್ತಾರೆ.
ಆದರೆ ಈಗ ನನ್ನ ಪರಿಸ್ಥಿತಿಯೇ ಬೇರೆ. ನನಗೆ ಓದಲು ಪುಸ್ತಕಗಳಿವೆ, ನೋಡಲು ಟಿ.ವಿ. ಇದೆ, ಮಾಹಿತಿ ತಿಳಿದುಕೊಳ್ಳಲು ಮೊಬೈಲ್ ಇದೆ. ಆದರೆ ಜೊತೆಯಾಗಿ ಆಟವಾಡಲು ಗೆಳೆಯರಿಲ್ಲ!
ನನಗೆ ನನ್ನ ಅಮ್ಮನೇ ಬೆಸ್ಟ್ ಫ್ರೆಂಡ್. ನನಗೆ ಮೊಬೈಲ್ ಬಳಸುವ ಚಟ ಅಷ್ಟಾಗಿ ಇಲ್ಲ. ಆದರೆ ನನ್ನ ತಂಗಿ ಯಾವಾಗಲೂ ಮೊಬೈಲ್ ಹಿಡಿಯಬೇಕೆಂದು ಬಯಸುತ್ತಾಳೆ. ಅಲ್ಲಿಂದಲೇ ಮನೆಯಲ್ಲಿ ಕೋಪ, ಜಗಳಗಳು ಪ್ರಾರಂಭವಾಗುತ್ತವೆ. ನನ್ನ ಅಮ್ಮ ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸುತ್ತಾರೆ. ಅನಗತ್ಯವಾಗಿ ಹೆಚ್ಚು ಸಮಯ ಮೊಬೈಲ್ ಬಳಸಿದರೆ ಅವರಿಗೆ ಕೋಪ ಬರುತ್ತದೆ. ನಾನೂ ಸಹ ಅನಾವಶ್ಯಕವಾಗಿ ಮೊಬೈಲ್ ಬಳಸುವುದಿಲ್ಲ.
ಹಿಂದಿನ ಕಾಲದಲ್ಲಿ ಮಕ್ಕಳು ಸಂಜೆಯಾಗುತ್ತಿದ್ದಂತೆ ಆಟವಾಡಲು ಅಂಗಳಕ್ಕೆ ಉತ್ಸಾಹದಿಂದ ಓಡಿಬರುತ್ತಿದ್ದರು. ಆದರೆ ಇಂದಿನ ಮಕ್ಕಳು ಮನೆಯಲ್ಲಿಯೇ ಕುಳಿತು ಮೊಬೈಲ್ನಲ್ಲಿ ಆಟಗಳನ್ನು ಆಡುತ್ತಿದ್ದಾರೆ.
ನಮ್ಮ ಅಪ್ಪ-ಅಮ್ಮಂದಿರ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದವು. ರಾತ್ರಿಯಾದರೆ ಅಜ್ಜ-ಅಜ್ಜಿಯರು ನೀತಿಕಥೆಗಳನ್ನು ಹೇಳುತ್ತಿದ್ದರು. ಮಕ್ಕಳು ಅವುಗಳನ್ನು ಕುತೂಹಲದಿಂದ ಕೇಳುತ್ತಾ ನಿದ್ರೆಗೆ ಜಾರುತ್ತಿದ್ದರು. ಆ ಕಥೆಗಳ ಮೂಲಕ ಒಳ್ಳೆಯ ಗುಣಗಳು, ಸಂಸ್ಕಾರ, ಶಿಸ್ತು ಮತ್ತು ಜೀವನದ ಮೌಲ್ಯಗಳನ್ನು ಕಲಿಯುತ್ತಿದ್ದರು.
ಆದರೆ ಇಂದಿನ ಅನೇಕ ಮಕ್ಕಳು ಮೊಬೈಲ್ ಅಥವಾ ದೂರದರ್ಶನ ನೋಡುತ್ತಲೇ ಸಮಯ ಕಳೆಯುತ್ತಿದ್ದಾರೆ. ಇದರಿಂದ ಕುಟುಂಬದ ಸದಸ್ಯರೊಂದಿಗೆ ಮಾತನಾಡುವ ಅವಕಾಶವೂ ಕಡಿಮೆಯಾಗುತ್ತಿದೆ. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಬದಲು ಮೊಬೈಲ್ ಬಳಕೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿದೆ.
ಅಜ್ಜ-ಅಜ್ಜಿಯರ ಕಾಲದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಗುರುಕುಲಗಳಿಗೆ ಆಸಕ್ತಿಯಿಂದ ಹೋಗುತ್ತಿದ್ದರು. ಉತ್ತಮ ಪರಿಸರದಲ್ಲಿ ಮರದ ನೆರಳಿನಲ್ಲಿ ಕುಳಿತು ಪಾಠ ಕಲಿಯುತ್ತಿದ್ದರಂತೆ. ಆದರೆ ಇಂದು ವಿದ್ಯಾರ್ಥಿಗಳಿಗೆ ಸುಸಜ್ಜಿತ ತರಗತಿಗಳು, ಉತ್ತಮ ಬೆಂಚುಗಳು, ಅಗತ್ಯ ಸೌಲಭ್ಯಗಳು ಹಾಗೂ ಕೆಲವು ಶಾಲೆಗಳಲ್ಲಿ ಹವಾನಿಯಂತ್ರಿತ ಕೊಠಡಿಗಳೂ ಇವೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಕೆಲವು ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದೆ ಆಲಸ್ಯ ಮಾಡುತ್ತಿರುವುದು ಬೇಸರದ ಸಂಗತಿ.
ನಮ್ಮ ಅಪ್ಪ-ಅಮ್ಮಂದಿರ ಕಾಲದಲ್ಲಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕ್ರೀಡೆಗಳಿಂದ ದೇಹಕ್ಕೆ ಉತ್ಸಾಹ, ಮನಸ್ಸಿಗೆ ಏಕಾಗ್ರತೆ, ಉತ್ತಮ ಮನೋಭಾವ ಹಾಗೂ ಸಂದರ್ಭಕ್ಕೆ ತಕ್ಕಂತೆ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯ ಬೆಳೆಯುತ್ತದೆ. ಕ್ರೀಡೆಗಳು ಶಿಸ್ತು, ಸಹಕಾರ, ಸ್ನೇಹ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ.
ಆದರೆ ಇಂದಿನ ಅನೇಕ ಮಕ್ಕಳು ಹೊರಗೆ ಹೋಗಿ ಆಟವಾಡುವುದಕ್ಕಿಂತ ಮನೆಯಲ್ಲಿಯೇ ಕುಳಿತು ಮೊಬೈಲ್ನಲ್ಲಿ ರೀಲ್ಸ್ ನೋಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಒಂದರ ನಂತರ ಮತ್ತೊಂದು ರೀಲ್ಸ್ ನೋಡುತ್ತಾ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಈ ರೀತಿಯಾಗಿ ನಿರಂತರವಾಗಿ ಚಿಕ್ಕಚಿಕ್ಕ ವಿಡಿಯೊಗಳನ್ನು ನೋಡುವ ಅಭ್ಯಾಸವು ಓದಿನ ಕಡೆಗೆ ಗಮನಹರಿಸಲು ಹಾಗೂ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ತೊಂದರೆ ಉಂಟುಮಾಡಬಹುದು.
ಹಿಂದಿನ ಕಾಲದಲ್ಲಿ ಚಿಕ್ಕ ಮಗು ಊಟ ಮಾಡಲು ಹಠ ಮಾಡಿದರೆ, ತಾಯಂದಿರು ಚಂದಮಾಮನನ್ನು ತೋರಿಸಿ ಕಥೆ ಹೇಳುತ್ತಾ ಊಟ ಮಾಡಿಸುತ್ತಿದ್ದರು. ಆದರೆ ಇಂದು ಕೆಲವು ಪೋಷಕರು ಮಗು ಊಟ ಮಾಡಲು ಹಠ ಮಾಡಿದರೆ ಅದರ ಕೈಯಲ್ಲಿ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಾರೆ.
ಮಕ್ಕಳು ಮೊಬೈಲ್ಗೆ ಹೆಚ್ಚು ಆಕರ್ಷಿತರಾಗಲು ಪೋಷಕರ ಅಭ್ಯಾಸಗಳೂ ಒಂದು ಕಾರಣವಾಗಿವೆ. ದೊಡ್ಡವರು ತಾವೇ ಹೆಚ್ಚು ಸಮಯ ಮೊಬೈಲ್ ಬಳಸುವುದಲ್ಲದೆ, ಮಕ್ಕಳ ಕೈಗೂ ಮೊಬೈಲ್ ಕೊಡುವುದರಿಂದ ಅವರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಮೊದಲು ಪೋಷಕರು ತಮ್ಮ ಮೊಬೈಲ್ ಬಳಕೆಯ ಬಗ್ಗೆಯೂ ಗಮನಹರಿಸಬೇಕು.
ಮೊಬೈಲ್ನಿಂದ ಅನೇಕ ಪ್ರಯೋಜನಗಳಿವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೊಸ ವಿಷಯಗಳನ್ನು ತಿಳಿದುಕೊಳ್ಳಲು, ಪಾಠಗಳನ್ನು ಕಲಿಯಲು ಹಾಗೂ ಜಗತ್ತಿನ ಮಾಹಿತಿಯನ್ನು ಪಡೆಯಲು ಇದು ಸಹಾಯಕವಾಗಿದೆ. ಆದರೆ ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಅತಿಯಾದ ಬಳಕೆಯಿಂದ ನಮ್ಮ ಅಮೂಲ್ಯವಾದ ಬಾಲ್ಯವನ್ನು ಕಳೆದುಕೊಳ್ಳಬಾರದು.
ಪೋಷಕರು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳನ್ನು ಹೊರಾಂಗಣ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಮಕ್ಕಳೊಂದಿಗೆ ಸಮಯ ಕಳೆಯಬೇಕು. ಅಜ್ಜ-ಅಜ್ಜಿಯರೊಂದಿಗೆ ಮಾತನಾಡಲು ಅವಕಾಶ ನೀಡಬೇಕು. ಅವರ ಅನುಭವಗಳು, ನೀತಿಕಥೆಗಳು ಮತ್ತು ಜೀವನದ ಪಾಠಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸಬೇಕು.
ಮನೆಯೇ ಮೊದಲ ಪಾಠಶಾಲೆ, ಅಂಗಳವೇ ಮೊದಲ ಆಟದ ಮೈದಾನ. ಮಕ್ಕಳು ಪುಸ್ತಕಗಳನ್ನು ಓದಬೇಕು, ಪ್ರಕೃತಿಯೊಂದಿಗೆ ಬೆರೆಯಬೇಕು, ಸ್ನೇಹಿತರೊಂದಿಗೆ ಆಟವಾಡಬೇಕು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕು.
ಮೊಬೈಲ್ ನಮ್ಮ ಜೀವನಕ್ಕೆ ಸಹಾಯಕವಾಗಬೇಕೇ ಹೊರತು ನಮ್ಮ ಬಾಲ್ಯವನ್ನೇ ಕಸಿದುಕೊಳ್ಳುವ ಸಾಧನವಾಗಬಾರದು. ತಂತ್ರಜ್ಞಾನವನ್ನು ಜಾಣ್ಮೆಯಿಂದ ಬಳಸುತ್ತಾ, ಓದು, ಆಟ, ಸ್ನೇಹ ಮತ್ತು ಕುಟುಂಬದ ಪ್ರೀತಿಯೊಂದಿಗೆ ನಮ್ಮ ಬಾಲ್ಯವನ್ನು ಸುಂದರವಾಗಿಸಿಕೊಳ್ಳೋಣ.
ವರ್ಷಿಣಿ ಪಿ. 9ನೇ ತರಗತಿ ಮಿಲ್ಟನ್ ಶಾಲೆ, ರಾಯಚೂರು.



