ತುಂಗಾ ಬಿಂಬ/ರಾಯಚೂರು: ತ್ಯಾಗ, ಬಲಿದಾನ ಹಾಗೂ ದೀರ್ಘ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದು, ಈ ಭಾಗದ ಇತಿಹಾಸವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ತಮ್ಮ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ವಿಮೋಚನಾ ಹೋರಾಟ, ಜನರ ತ್ಯಾಗ ಹಾಗೂ ಅಭಿವೃದ್ಧಿಗಾಗಿ ನಡೆದ ಪ್ರಯತ್ನಗಳನ್ನು ನೆನಪಿಸಿಕೊಂಡರು.

ಶಿಕ್ಷಣ, ಉದ್ಯೋಗ, ನೀರಾವರಿ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕಲ್ಯಾಣ ಕರ್ನಾಟಕ ಭಾಗ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ. ವಿಶೇಷ ಸ್ಥಾನಮಾನದಿಂದ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರದೇಶದ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಈ ಭಾಗವು ದೇಶ ಸ್ವಾತಂತ್ರ್ಯ ಪಡೆದ ನಂತರವೂ ನಿಜಾಮರ ಆಡಳಿತದಲ್ಲೇ ಮುಂದುವರಿದಿತ್ತು. ಹೈದರಾಬಾದ್ ವಿಮೋಚನಾ ಹೋರಾಟ ಮತ್ತು ಹೋರಾಟಗಾರರ ತ್ಯಾಗದ ಫಲವಾಗಿ 1948ರ ಸೆ.17ರಂದು ಈ ಪ್ರದೇಶವು ನಿಜಾಮರ ಆಡಳಿತದಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಆ ಐತಿಹಾಸಿಕ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ವಿಮೋಚನಾ ಹೋರಾಟಗಾರರ ತ್ಯಾಗವನ್ನು ಗೌರವಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಈ ಭಾಗದ ಇತಿಹಾಸ ಪರಿಚಯಿಸುವುದು ಹಾಗೂ ಅಭಿವೃದ್ಧಿಗೆ ಹೊಸ ಸಂಕಲ್ಪ ಕೈಗೊಳ್ಳುವುದು ಉತ್ಸವದ ಆಶಯವಾಗಬೇಕು ಎಂದು ಎನ್.ಎಸ್. ಬೋಸರಾಜು ತಿಳಿಸಿದರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಶಾಂತಪ್ಪ, ಜಯಣ್ಣ, ಮೊಹಮ್ಮದ್ ಶಾಲಂ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ, ಜಿಂದಪ್ಪ, ತಿಮ್ಮಪ್ಪ ನಾಯಕ, ಹರಿಬಾಬು, ಮಲ್ಲೇಶ ಕೊಲಿಮಿ, ಬಸವರಾಜ ಪಟೀಲ್, ವಿಶ್ವನಾಥ ಪಾಟೀಲ್, ಕುರುಬೂರು ಜ್ಞಾನಜೀನಯ, ರಮೇಶ್ ಯಾದವ್, ಜಯವಂತರಾಯ ಪಾತಂಗೆ, ಬಸರಾಜ ಪಾಟೀಲ್, ಬಿ. ರಮೇಶ್, ಯೂಸುಫ್ ಖಾನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.