ರಾಯಚೂರು: ನಗರದ ಮುನಿಯಪ್ಪ ಮುದ್ದಪ್ಪ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಪ್ರಾಚಾರ್ಯರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಹಿನ್ನೆಲೆಯನ್ನು ಹೊಂದಿದೆ. ನಿಜಾಮರ ಆಡಳಿತದಿಂದ ಈ ಭಾಗವನ್ನು ವಿಮೋಚನೆಗೊಳಿಸಲು ಅನೇಕ ಹೋರಾಟಗಾರರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಅವರ ಹೋರಾಟ ಹಾಗೂ ಕೊಡುಗೆಯನ್ನು ಇಂದಿನ ಪೀಳಿಗೆ ಸ್ಮರಿಸಬೇಕು ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗಾವಕಾಶ, ಸಾಮಾಜಿಕ ಜಾಗೃತಿ ಹಾಗೂ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಈ ಭಾಗದ ಇತಿಹಾಸ ಮತ್ತು ಹೋರಾಟದ ಹಿನ್ನೆಲೆಯನ್ನು ಅರಿತುಕೊಂಡು, ಉತ್ತಮ ನಾಗರಿಕರಾಗಿ ರೂಪುಗೊಳ್ಳುವುದರೊಂದಿಗೆ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಅಮರೇಶ್ ಪಾಟೀಲ್, ಉಪಾಧ್ಯಕ್ಷ ಅದನಗೌಡ ಪಾಟೀಲ್, ಕಾರ್ಯದರ್ಶಿ ಡಾ. ಮಂಜುನಾಥ ಪಾಟೀಲ್ ವಟಗಲ್, ಖಜಾಂಚಿ ಶರಣಬಸವ ಪಾಟೀಲ್, ಆಡಳಿತಾಧಿಕಾರಿ ಮಂಜುನಾಥ ಎನ್. ಹೊಸೂರ್ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.