ತುಂಗ ಬಿಂಬ/ರಾಯಚೂರು: ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ ಅವರು ಮಲದಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲು ಆಗಮಿಸಿದ್ದ ವೇಳೆ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವರು ‘ಬಾಯ್ಕಾಟ್ ಚಳವಳಿ’ ಹೆಸರಿನಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ತಪ್ಪು ಸಂದೇಶ ಹರಡಲು ಯತ್ನಿಸಿರುವುದು ಖಂಡನೀಯ ಎಂದು ಜೆಡಿಎಸ್ ಮುಖಂಡ ಚನ್ನಪ್ಪ ಮಸಿದಾಪುರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಯ್ಕಾಟ್’ ಎಂದರೆ ಇಡೀ ಗ್ರಾಮದ ಜನರು ಒಗ್ಗಟ್ಟಿನಿಂದ ಜನಪ್ರತಿನಿಧಿಯನ್ನು ಬಹಿಷ್ಕರಿಸುವಂತಹ ಪರಿಸ್ಥಿತಿ. ಆದರೆ ಮಲದಕಲ್ನಲ್ಲಿ ಅಂತಹ ವಾತಾವರಣವೇ ಇರಲಿಲ್ಲ. ಶಾಸಕರು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು, ಸ್ಥಳೀಯ ಮುಖಂಡರು ಹಾಗೂ ಮಹಿಳೆಯರು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪೂಜಾ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಕೆಲವೇ ಮಂದಿ ನಡೆಸಿದ ಪ್ರತಿಭಟನೆಯನ್ನು ಇಡೀ ಗ್ರಾಮದ ಜನರ ವಿರೋಧ ಎಂಬಂತೆ ಬಿಂಬಿಸುವುದು ವಾಸ್ತವಕ್ಕೆ ದೂರವಾಗಿದೆ. ಗ್ರಾಮದ ಲಿಂಗಪ್ಪ, ಬಾಬು ನಾಯಕ, ದಾದಾಪೀರ್, ಭೀಮೇಶ್ ನಾಯಕ್ ಸೇರಿದಂತೆ ಕೆಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ನಿಲುವನ್ನೇ ಸಂಪೂರ್ಣ ಗ್ರಾಮದ ಅಭಿಪ್ರಾಯವೆಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಶಾಸಕರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಜನರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಅಭಿವೃದ್ಧಿ ಚಟುವಟಿಕೆಗಳನ್ನು ಸಹಿಸದ ಕೆಲವರು ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆಯ ದಾರಿ ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಲೋಪಗಳಿದ್ದರೆ ಅವುಗಳನ್ನು ಪ್ರಶ್ನಿಸುವ, ಸಲಹೆ ನೀಡುವ ಹಾಗೂ ರಚನಾತ್ಮಕವಾಗಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ರಾಜಕೀಯ ದ್ವೇಷದಿಂದ ಪ್ರತಿಭಟನೆಯನ್ನು ಬಳಸಿಕೊಂಡು ಶಾಸಕರ ವಿರುದ್ಧ ಅಪಪ್ರಚಾರ ನಡೆಸುವುದು ಸೂಕ್ತವಲ್ಲ ಎಂದು ಚನ್ನಪ್ಪ ಮಸಿದಾಪುರ ಹೇಳಿದರು.
ಶಾಸಕರ ಭೇಟಿ ವೇಳೆ ಪ್ರತಿಭಟನೆ ನಡೆಯಬಹುದೆಂಬ ಮಾಹಿತಿ ಪೊಲೀಸರಿಗೆ ಮೊದಲೇ ಇದ್ದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರತಿಭಟನಾಕಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬದಲು ಅವರಿಗೆ ಪರೋಕ್ಷವಾಗಿ ಸಹಕಾರ ನೀಡಿದಂತೆ ಕಂಡುಬಂದಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.
ಮಲದಕಲ್ ಗ್ರಾಮದ ಬಹುತೇಕ ಜನರ ನಿಲುವನ್ನು ಕಡೆಗಣಿಸಿ, ಕೆಲವರ ಪ್ರತಿಭಟನೆಯನ್ನೇ ಇಡೀ ಗ್ರಾಮದ ನಿರ್ಧಾರವೆಂದು ತೋರಿಸುವ ಪ್ರಯತ್ನವನ್ನು ಜೆಡಿಎಸ್ ಖಂಡಿಸುತ್ತದೆ. ಜನಪ್ರತಿನಿಧಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮಾರ್ಗದಲ್ಲಿ ವ್ಯಕ್ತಪಡಿಸಬೇಕು. ಪ್ರತಿಭಟನೆಯ ನೆಪದಲ್ಲಿ ವೈಯಕ್ತಿಕ ಅಥವಾ ರಾಜಕೀಯ ದ್ವೇಷ ಸಾಧಿಸುವ ಪ್ರಯತ್ನಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮರಿಯಣ್ಣ ನಾಯಕ್, ಮೆಹಬೂಬ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



