ರಾಯಚೂರು: ಆಯುಷ್ ವೈದ್ಯರ ವೃತ್ತಿಪರ ಹಕ್ಕು, ಸೇವಾ ಭದ್ರತೆ ಹಾಗೂ ಆರೋಗ್ಯ ಸೇವೆಯಲ್ಲಿ ಸಮರ್ಪಕ ಅವಕಾಶ ಕಲ್ಪಿಸುವುದು ಸೇರಿದಂತೆ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ಘಟಕದ ನೇತೃತ್ವದಲ್ಲಿ ಸೆ.22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಡಾ. ಆನಂದ ಕಿರಿಶಾಳ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 32 ಘಟಕಗಳಿಂದ ಸಾವಿರಾರು ಆಯುಷ್ ವೈದ್ಯರು ರಾಯಚೂರಿನಲ್ಲಿ ನಡೆಯಲಿರುವ ‘ರಾಯಚೂರು ಚಲೋ’ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳಿಗೆ ಸ್ಪಷ್ಟತೆ, ಸೇವಾ ಭದ್ರತೆ ಹಾಗೂ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬುದು ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಅನ್ವಯವಾಗುವ ಕಾನೂನು, ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿ ಆಯುಷ್ ವೈದ್ಯರಿಗೆ ಆಧುನಿಕ ಔಷಧಗಳ ಬಳಕೆಗೆ ಕಾನೂನುಬದ್ಧ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಿತ ರಾಷ್ಟ್ರೀಯ ಆಯೋಗಗಳ ಕಾಯ್ದೆಗಳು ಮತ್ತು ಗಜೆಟ್ ಅಧಿಸೂಚನೆಗಳ ಆಶಯಕ್ಕೆ ಅನುಗುಣವಾಗಿ ಆಯುಷ್ ವೈದ್ಯರ ವೃತ್ತಿಪರ ಹಕ್ಕುಗಳು ಹಾಗೂ ಸೇವಾ ಅವಕಾಶಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಆಯುಷ್ ವೈದ್ಯರ ವಿರುದ್ಧ ಸಲ್ಲಿಕೆಯಾಗುವ ದೂರುಗಳನ್ನು ಕಾನೂನುಬದ್ಧ ಪ್ರಕ್ರಿಯೆಯ ಮೂಲಕವೇ ಪರಿಶೀಲಿಸಬೇಕು. ಅರ್ಹ ರೋಗಿ ಅಥವಾ ಅವರ ಅಧಿಕೃತ ಸಂಬಂಧಿಕರಿಂದ ಸಲ್ಲಿಕೆಯಾಗುವ ದೂರುಗಳಿಗೆ ಸೂಕ್ತ ವಿಚಾರಣಾ ವ್ಯವಸ್ಥೆ ಇರಬೇಕು ಎಂಬುದು ಫೆಡರೇಷನ್ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರ ಅನುಭವ ಮತ್ತು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಸುರಕ್ಷಿತ, ಕೈಗೆಟುಕುವ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಡಾ. ಆನಂದ ಕಿರಿಶಾಳ ಆಗ್ರಹಿಸಿದರು.
ಈ ಬೇಡಿಕೆಗಳಿಗೆ ಸರ್ಕಾರದಿಂದ ಸ್ಪಂದನೆ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದರು.



