ರಾಯಚೂರು: ಆರ್ಎಸ್ಎಸ್ನ ರಾಜಕೀಯ ಮತ್ತು ಸೈದ್ಧಾಂತಿಕ ಪ್ರಭಾವದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದು ಸೇರಿದಂತೆ ದೇಶದ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳ ಕುರಿತು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ 13ನೇ ಮಹಾಧಿವೇಶನದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಜೆ. ಜೇಮ್ಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಾಧಿವೇಶನದ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಅವರು, ಸೆ.16ರಿಂದ 20ರವರೆಗೆ ರಾಯಚೂರಿನಲ್ಲಿ ಐದು ದಿನ ನಡೆದ ಮಹಾಧಿವೇಶನದಲ್ಲಿ ದೇಶದ 14 ರಾಜ್ಯಗಳು ಹಾಗೂ ಸಾಗರೋತ್ತರ ಸಮಿತಿಯನ್ನು ಪ್ರತಿನಿಧಿಸಿ ಸುಮಾರು 250 ಪ್ರತಿನಿಧಿಗಳು, ವೀಕ್ಷಕರು ಮತ್ತು ಸೌಹಾರ್ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದರು.
ಮಹಾಧಿವೇಶನದಲ್ಲಿ ಪಕ್ಷದ ಮುಂದಿನ ರಾಜಕೀಯ ಹಾಗೂ ಸಂಘಟನಾತ್ಮಕ ಹಾದಿಯ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದ್ದು, 33 ಸದಸ್ಯರ ಕೇಂದ್ರ ಸಮಿತಿ, 13 ಸದಸ್ಯರ ಪಾಲಿಟ್ ಬ್ಯೂರೋ ಹಾಗೂ ಮೂವರು ಸದಸ್ಯರ ಕೇಂದ್ರ ನಿಯಂತ್ರಣ ಆಯೋಗವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಜೇಮ್ಸ್, ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ನೀತಿಗಳು ಹಾಗೂ ಬಲಪಂಥೀಯ ಕಾರ್ಪೊರೇಟ್ ವ್ಯವಸ್ಥೆಯಿಂದ ವಿಶ್ವದ ವಿವಿಧ ಭಾಗಗಳ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. ಪ್ಯಾಲೆಸ್ಟೈನ್ನಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇರಾನ್ ವಿರುದ್ಧದ ಕ್ರಮಗಳನ್ನೂ ಅವರು ಖಂಡಿಸಿದರು. ಜಗತ್ತಿನ ಹಲವೆಡೆ ಬಲಪಂಥೀಯ ರಾಜಕೀಯ ಶಕ್ತಿಗಳು ಬಲಗೊಳ್ಳುತ್ತಿರುವಂತೆಯೇ ಅವುಗಳ ವಿರುದ್ಧ ಜನರ ಪ್ರತಿರೋಧವೂ ಹೆಚ್ಚುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಆರ್ಎಸ್ಎಸ್ನ ಪ್ರಭಾವ ವಿಸ್ತರಿಸುತ್ತಿದೆ ಎಂದು ಆರೋಪಿಸಿದ ಅವರು, ದೇಶದ ಸಂಪನ್ಮೂಲಗಳು ಮತ್ತು ಸಾರ್ವಜನಿಕ ಸಂಪತ್ತಿನ ಮೇಲೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಹಿಡಿತ ಹೆಚ್ಚುತ್ತಿದೆ ಎಂದರು. ಅದಾನಿ, ಅಂಬಾನಿ ಸೇರಿದಂತೆ ಕಾರ್ಪೊರೇಟ್ ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರದ ನೀತಿಗಳು ರೂಪುಗೊಳ್ಳುತ್ತಿವೆ ಎಂಬುದು ತಮ್ಮ ಪಕ್ಷದ ನಿಲುವಾಗಿದೆ ಎಂದು ಹೇಳಿದರು.
ಪೊಲೀಸ್, ಆಡಳಿತ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲೆ ಬಲಪಂಥೀಯ ಸಿದ್ಧಾಂತದ ಪ್ರಭಾವ ಹೆಚ್ಚುತ್ತಿದೆ ಎಂದು ದೂರಿದ ಅವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಹಾಧಿವೇಶನದಲ್ಲಿ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಜಾತಿ ವ್ಯವಸ್ಥೆಯ ಪ್ರಶ್ನೆಯನ್ನು ಕೇವಲ ಸಾಮಾಜಿಕ ಸಮಸ್ಯೆಯಾಗಿ ನೋಡದೆ, ಜನರ ಜೀವನೋಪಾಯ ಹಾಗೂ ಆರ್ಥಿಕ ಶೋಷಣೆಯ ಪ್ರಶ್ನೆಗಳೊಂದಿಗೆ ಜೋಡಿಸಿ ಹೋರಾಟ ರೂಪಿಸುವ ಅಗತ್ಯವಿದೆ. ಈ ವಿಷಯದಲ್ಲಿ ಭಾರತೀಯ ಕಮ್ಯುನಿಸ್ಟ್ ಚಳವಳಿಯ ಹಿಂದಿನ ಅನುಭವ ಮತ್ತು ತಪ್ಪುಗಳನ್ನು ಆತ್ಮವಿಮರ್ಶಾತ್ಮಕವಾಗಿ ಪರಿಶೀಲಿಸಬೇಕೆಂಬ ಅಭಿಪ್ರಾಯ ಮಹಾಧಿವೇಶನದಲ್ಲಿ ವ್ಯಕ್ತವಾಗಿದೆ ಎಂದು ಜೇಮ್ಸ್ ಹೇಳಿದರು.
ಕಾರ್ಮಿಕರು, ರೈತರು, ದಲಿತರು, ಆದಿವಾಸಿಗಳು, ಮಹಿಳೆಯರು ಸೇರಿದಂತೆ ಶೋಷಿತ ಸಮುದಾಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದರ ಜೊತೆಗೆ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಗಳೊಂದಿಗೆ ವಿಶಾಲ ಐಕ್ಯತೆ ರೂಪಿಸಲು ಪಕ್ಷ ಮುಂದಾಗಲಿದೆ ಎಂದು ತಿಳಿಸಿದರು.
ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಆರ್. ಮಾನಸಯ್ಯ ಮಾತನಾಡಿ, ಐದು ದಿನಗಳ ಮಹಾಧಿವೇಶನದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದ ಒಟ್ಟು 19 ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಪ್ಯಾಲೆಸ್ಟೈನ್ ಮತ್ತು ಇರಾನ್ ಕುರಿತ ಅಂತಾರಾಷ್ಟ್ರೀಯ ಬೆಳವಣಿಗೆಗಳು, ಕೇಂದ್ರ ಸರ್ಕಾರದ ಆರ್ಥಿಕ ಹಾಗೂ ಶಿಕ್ಷಣ ನೀತಿಗಳು, ಎನ್ಆರ್ಸಿ ಮತ್ತು ಎಸ್ಐಆರ್, ಉಮರ್ ಖಾಲಿದ್ ಅವರ ಬಂಧನ, ಜಾತಿ ಗಣತಿ, ಕ್ಷೇತ್ರ ಮರುವಿಂಗಡಣೆ, ಕೇಂದ್ರ–ರಾಜ್ಯ ಸಂಬಂಧಗಳು ಹಾಗೂ ರಾಜ್ಯಪಾಲರ ಹುದ್ದೆ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ದೇಶದ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ರಾಜ್ಯಗಳ ಹಕ್ಕುಗಳನ್ನು ಸಂರಕ್ಷಿಸಬೇಕು ಎಂಬ ಅಭಿಪ್ರಾಯವನ್ನೂ ಮಹಾಧಿವೇಶನ ವ್ಯಕ್ತಪಡಿಸಿದೆ. ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕು ಎಂಬ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಲಾಗಿದೆ ಎಂದು ಮಾನಸಯ್ಯ ಹೇಳಿದರು.
ಐದು ದಿನಗಳ ಮಹಾಧಿವೇಶನದ ಯಶಸ್ವಿ ಆಯೋಜನೆಗೆ ಸಹಕರಿಸಿದ ರಾಯಚೂರಿನ ವಿವಿಧ ಪ್ರಗತಿಪರ, ಪ್ರಜಾಸತ್ತಾತ್ಮಕ ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ. ಗಂಗಾಧರ್, ಶಂಕರ್, ಬಿ. ರುದ್ರಯ್ಯ, ಕಬೀರ್, ತುಹಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



