ರಾಯಚೂರು, ಸೆ.21: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಕರಡು ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಅರ್ಹ ಮತದಾರರ ಹೆಸರು ಕೈಬಿಡುವ ಆತಂಕಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೆ.23ರಂದು ಸಂಜೆ 5 ಗಂಟೆಗೆ ನಗರದ ಟಿಪ್ಪು ಸುಲ್ತಾನ್ ಪಾರ್ಕ್ನಲ್ಲಿ ನಟ ಪ್ರಕಾಶ್ ರೈ ನೇತೃತ್ವದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ನಾಗರಿಕ ಮತ ಕಾವಲು ಸಮಿತಿಯ ಮಾರೆಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 18 ವರ್ಷ ಮೇಲ್ಪಟ್ಟ ವಯಸ್ಕರ ಜನಸಂಖ್ಯೆ ಮತ್ತು ಮತದಾರರ ಪಟ್ಟಿಯಲ್ಲಿರುವವರ ಸಂಖ್ಯೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ ಚುನಾವಣಾ ಆಯೋಗ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಸೆನ್ಸಸ್ ಆಧಾರಿತ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 5.8 ಕೋಟಿ ಎಂದು ಹೇಳಲಾಗುತ್ತಿದ್ದರೆ, ಎಸ್ಐಆರ್ ಪ್ರಕ್ರಿಯೆಯ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ ಸುಮಾರು 4.5 ಕೋಟಿಯಷ್ಟಿದೆ. ಈ ಅಂತರಕ್ಕೆ ಕಾರಣವೇನು ಎಂಬುದನ್ನು ಚುನಾವಣಾ ಆಯೋಗ ವಿವರಿಸಬೇಕು ಎಂದು ಹೇಳಿದರು.
ಎಸ್ಐಆರ್ ಪರಿಷ್ಕರಣೆಯ ಬಳಿಕದ ಕರಡು ಪಟ್ಟಿಯಲ್ಲಿ 4,46,80,151 ಮತದಾರರ ಹೆಸರು ದಾಖಲಾಗಿದ್ದು, ಅದಕ್ಕೂ ಮೊದಲು ಮತದಾರರ ಸಂಖ್ಯೆ 5,54,32,314 ಇತ್ತು ಎಂದು ಅವರು ಹೇಳಿದರು. ಪರಿಷ್ಕರಣೆ ವೇಳೆ 1,07,96,415 ಮಂದಿಯನ್ನು ‘ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್ ಅಂಡ್ ಅದರ್ಸ್’ (ASDDO) ವರ್ಗದಲ್ಲಿ ಗುರುತಿಸಿ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಮಾಹಿತಿಯಿದೆ ಎಂದರು.
ಇದರ ಜೊತೆಗೆ ಸುಮಾರು 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅವರಲ್ಲಿ 23.45 ಲಕ್ಷ ಮತದಾರರ ವಿವರಗಳು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿಲ್ಲ ಎಂದು ಗುರುತಿಸಲಾಗಿದ್ದು, 20.35 ಲಕ್ಷ ಮಂದಿಯ ಎನ್ಯೂಮರೇಷನ್ ಫಾರಂಗಳಲ್ಲಿ ವಿವಿಧ ಅಸಂಗತತೆಗಳು ಕಂಡುಬಂದಿವೆ ಎಂದು ಚುನಾವಣಾ ಇಲಾಖೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿದರು.
2002ರ ಮತಪಟ್ಟಿಯೊಂದಿಗೆ ಸಂಪರ್ಕ ಕಂಡುಬಂದಿಲ್ಲ ಅಥವಾ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮತದಾರರು ಲಭ್ಯವಾಗಲಿಲ್ಲ ಎಂಬ ಕಾರಣಗಳನ್ನೇ ಆಧಾರವಾಗಿಸಿಕೊಂಡು ಹೆಸರು ತೆಗೆದುಹಾಕಬಾರದು ಎಂದು ಮಾರೆಪ್ಪ ಒತ್ತಾಯಿಸಿದರು. ಪ್ರತಿಯೊಬ್ಬ ಮತದಾರರ ನೈಜ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಸೆ.4ರ ವೇಳೆಗೆ 43,81,141 ನೋಟಿಸ್ಗಳು ಸಿದ್ಧಗೊಂಡಿದ್ದು, ಅವುಗಳಲ್ಲಿ 7,31,770 ನೋಟಿಸ್ಗಳನ್ನು ವಿತರಿಸಲಾಗಿತ್ತು. ಉಳಿದ 36,49,371 ನೋಟಿಸ್ಗಳು ವಿತರಣೆಗೆ ಬಾಕಿ ಇದ್ದವು ಎಂದು ಅವರು ತಿಳಿಸಿದರು. ‘ನೋ ಮ್ಯಾಪಿಂಗ್’ ಮತ್ತು ‘ಅನಾಮಲೀಸ್’ ವಿಭಾಗಕ್ಕೆ ಸೇರಿದ ಮತದಾರರಿಗೆ ಈ ನೋಟಿಸ್ಗಳನ್ನು ನೀಡಲಾಗುತ್ತಿದೆ ಎಂದರು.
ಮತದಾರರು ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಸ್ಥಳಾಂತರಗೊಂಡ ಸಂದರ್ಭದಲ್ಲೂ ಸಮಸ್ಯೆಗಳು ಎದುರಾಗುತ್ತಿರುವುದಾಗಿ ಮಾರೆಪ್ಪ ಆರೋಪಿಸಿದರು. ವಿಳಾಸ ಬದಲಾವಣೆಯಾದಾಗ ಮತದಾರರ ಹೆಸರು ಹೊಸ ವಿಳಾಸಕ್ಕೆ ವರ್ಗಾವಣೆಗೊಳ್ಳಬೇಕಾದರೆ, ಕೆಲವರ ಹೆಸರು ಪಟ್ಟಿಯಿಂದಲೇ ಕೈಬಿಡಲಾಗಿದೆ ಎಂಬ ದೂರುಗಳು ಬಂದಿವೆ. ಎನ್ಯೂಮರೇಷನ್ ಫಾರಂ ವಿತರಣೆ ಹಾಗೂ ಸ್ವೀಕಾರದ ಪ್ರಕ್ರಿಯೆಯಲ್ಲಿಯೂ ಅಡಚಣೆಗಳಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಜವಾಬ್ದಾರಿ ಹೊಂದಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ಕಾರ್ಯನಿರ್ವಹಣೆಯ ಮೇಲೂ ನಿಗಾ ಇರಬೇಕು. ಯಾವುದೇ ಅರ್ಹ ಮತದಾರರ ಹೆಸರು ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ಕಾರಣಗಳಿಂದ ತಪ್ಪಾಗಿ ಕೈಬಿಡದಂತೆ ಚುನಾವಣಾ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಮತದಾರರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇದೆಯೇ, ಯಾವುದೇ ನೋಟಿಸ್ ಅಥವಾ ಆಕ್ಷೇಪಣೆ ದಾಖಲಾಗಿದೆಯೇ ಹಾಗೂ ಅಗತ್ಯವಿದ್ದಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ವಿಧಾನವೇನು ಎಂಬ ಕುರಿತು ಮಾಹಿತಿ ನೀಡಲು ನಾಗರಿಕ ಮತ ಕಾವಲು ಸಮಿತಿ ಮುಂದಾಗಿದೆ. ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ಈ ಸಂಬಂಧ ವಿಶೇಷ ಅಪ್ಲಿಕೇಶನ್ವೊಂದನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಸೆ.23ರಂದು ನಡೆಯುವ ಸಮಾಲೋಚನಾ ಸಭೆಯಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಗೊಂದಲಗಳು, ಮತಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ಅನುಮಾನ ಹೊಂದಿರುವವರು ಹಾಗೂ ಮತದಾರರ ಹಕ್ಕುಗಳ ಕುರಿತು ಮಾಹಿತಿ ಪಡೆಯಲು ಬಯಸುವವರು ಭಾಗವಹಿಸಬಹುದು ಎಂದು ಮಾರೆಪ್ಪ ಮನವಿ ಮಾಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಮ್ಯಾಪಿಂಗ್ ಆಗದ ಮತದಾರರು, ವಿಳಾಸ ಬದಲಾಯಿಸಿದವರು, ನೋಟಿಸ್ ಪಡೆದವರು ಹಾಗೂ ಕರಡು ಪಟ್ಟಿಯಿಂದ ಹೊರಗುಳಿದವರ ಕುರಿತು ಚುನಾವಣಾ ಆಯೋಗ ಸಮಗ್ರ ಮಾಹಿತಿ ನೀಡಬೇಕು ಎಂದು ನಾಗರಿಕ ಮತ ಕಾವಲು ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಜಾ ಅಸ್ಲಾಂ, ಬಸವರಾಜ್, ಮಾರಮ್ಮ, ಎಂ.ಆರ್. ಬೇರಿ, ಆಂಜನೇಯ, ಹಸಿಮುದ್ದೀನ್, ಮುಸ್ತಾಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



