ತುಂಗ ಬಿಂಬ/ರಾಯಚೂರು, ಸೆ.18: ಸಂಸ್ಕೃತ ಭಾಷೆಯನ್ನು ಶಾಲಾ ಶಿಕ್ಷಣದ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಕೃಷ್ಣಮೂರ್ತಿ ಹೆಬ್ಸೂರ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಸಂಸ್ಕೃತ ಭಾರತಿಯ ವತಿಯಿಂದ ಆಯೋಜಿಸಿದ್ದ 10 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆ ನಮ್ಮ ದೇಶದ ಪ್ರಾಚೀನ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿದ್ದು, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಈ ಭಾಷೆಯ ಪರಿಚಯ ಮಾಡಿಕೊಡುವುದರಿಂದ ಭಾಷಾ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಸಂಸ್ಕೃತಿಯ ಅರಿವು ಮೂಡಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಕೃತ ಕಲಿಯಲು ಆಸಕ್ತಿ ಹೊಂದಿರುವವರಿಗೆ ಮುಂದಿನ ದಿನಗಳಲ್ಲಿಯೂ ಶಂಕರ ಮಠದ ಸಭಾಂಗಣವನ್ನು ಕಲಿಕಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಕೃತ ಭಾರತಿಯ ರಾಯಚೂರು ಜನಪದ ಸಂಯೋಜಕ ಗಾರಾ ಶ್ಯಾಮಸುಂದರ್ ಮಾತನಾಡಿ, 10 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ದೇಶ, ಸಂಸ್ಕೃತ ಭಾರತಿಯ ಧ್ಯೇಯ, ದೃಷ್ಟಿಕೋನ ಹಾಗೂ ಸಂಘಟನೆಯ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿಯೂ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಸಂಸ್ಕೃತ ಕಲಿಯಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಾಚಾರ ಶಿಕ್ಷಣ ಪ್ರಮುಖ ಮನೋಹರ್ ಬಡಿಗೇರ್ ಹಾಗೂ ಸಹ ಶಿಕ್ಷಕ ಚಂದನ್ ಬರ್ಮನ್ ಶಿಬಿರವನ್ನು ನಡೆಸಿಕೊಟ್ಟರು. ಚಂದನ್ ಬರ್ಮನ್ ಸಂಸ್ಕೃತ ಭಾಷೆಯ ಮಹತ್ವ ಮತ್ತು ಪ್ರಾಮುಖ್ಯತೆಯ ಕುರಿತು ವಿವರಿಸಿದರು.
ಸೆ.17ರಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಚಿತ್ರಾ ಜಾಗೀರದಾರ್, ಮನೋಹರ್ ಬಡಿಗೇರ್ ಸೇರಿದಂತೆ ಶಿಬಿರಾರ್ಥಿಗಳು, ಸಂಸ್ಕೃತಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹತ್ತು ದಿನಗಳ ಅವಧಿಯಲ್ಲಿ ಕಲಿತ ಸಂಸ್ಕೃತ ಭಾಷಾ ಜ್ಞಾನವನ್ನು ಶಿಬಿರಾರ್ಥಿಗಳು ವಿವಿಧ ಪ್ರಸ್ತುತಿಗಳ ಮೂಲಕ ಪ್ರದರ್ಶಿಸಿದರು. ಸುರೇಖಾ ಮತ್ತು ರಜಿನಿ ಶಿಬಿರದ ಅನುಭವ ಹಾಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಿಬಿರಾರ್ಥಿ ಅಮಿತ್ ದಂಡಿನ್ ಸಮಾರೋಪ ಕಾರ್ಯಕ್ರಮವನ್ನು ಸಂಸ್ಕೃತ ಭಾಷೆಯಲ್ಲೇ ನಿರೂಪಿಸಿದರು. ಶ್ರೀನಿವಾಸ್ ಕೊಂಡೇದ್ ಜಪಾನ್ ದೇಶದ ಪ್ರಜೆಗಳು ಸಂಸ್ಕೃತ ಕಲಿಯುತ್ತಿರುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ರಾಮಚಂದ್ರ ಸಂಸ್ಕೃತ ಶ್ಲೋಕ ಪಠಿಸಿದರು. ಪ್ರಹ್ಲಾದ್ ಹಾಗೂ ವಿಜಯಕುಮಾರ್ ವಂದಾರ್ಪಣೆ ನೆರವೇರಿಸಿದರು.
ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ಹೊಂದಿರುವವರು ಹೆಚ್ಚಿನ ಮಾಹಿತಿಗಾಗಿ 9980130406 ಸಂಖ್ಯೆಯನ್ನು ಸಂಪರ್ಕಿಸಬಹುದು.



