ರಾಯಚೂರು: ಮುಂಬರುವ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕರ್ಕಶ ಧ್ವನಿಯ ಡಿಜೆ ಹಾಗೂ ನಿಯಮ ಮೀರಿ ಧ್ವನಿವರ್ಧಕಗಳನ್ನು ಬಳಸಿದರೆ ಸಂಬಂಧಿಸಿದ ಡಿಜೆ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಖಡಕ್ ಎಚ್ಚರಿಕೆ ನೀಡಿದರು.

ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸಮಾಜದ ಹಿರಿಯರು, ಗಣ್ಯರು ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಸರ್ಜನೆ ಸಂದರ್ಭದಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಅತಿಯಾದ ಶಬ್ದದ ಡಿಜೆ ಬಳಕೆಗೆ ಅವಕಾಶ ನೀಡಲಾಗುವುದಿಲ್ಲ. ನಿಗದಿತ ನಿಯಮಗಳ ವ್ಯಾಪ್ತಿಯಲ್ಲಿಯೇ ಧ್ವನಿವರ್ಧಕಗಳನ್ನು ಬಳಸಬೇಕು ಎಂದು ತಿಳಿಸಿದರು.

ನಂತರ ಕಲ್ಲಾನೆ ಗಜಾನನ ಸಮಿತಿಯವರೊಂದಿಗೆ ಮಾತನಾಡಿದ ಎಸ್‌ಪಿ ಅರುಣಾಂಶು ಗಿರಿ, ಡಿಜೆ ವ್ಯವಸ್ಥೆಯಲ್ಲಿ ಒಂದು ಬೇಸ್ ಹಾಗೂ ಒಂದು ಟಾಪ್ ಮಾತ್ರ ಬಳಸಬೇಕು. ನಿಯಮ ಮೀರಿ ಹೆಚ್ಚಿನ ಸಾಮರ್ಥ್ಯದ ಅಥವಾ ಕರ್ಕಶ ಧ್ವನಿಯ ಉಪಕರಣಗಳನ್ನು ಬಳಸಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ವಾಹನವನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗಳು ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ನಡೆಯಬೇಕು. ಆಯೋಜಕರು ಪೊಲೀಸ್ ಇಲಾಖೆಯ ಸೂಚನೆಗಳಿಗೆ ಸಹಕರಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಹಿರಿಯ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಸರ್ಜನೆ ಸಂಬಂಧಿತ ವ್ಯವಸ್ಥೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಎಎಸ್‌ಪಿ ಜಿ. ಹರೀಶ್, ಉಪವಿಭಾಗಾಧಿಕಾರಿ ಶಾಂತವೀರ ಇ., ಸಿಪಿಐ ಉಮೇಶ್ ಕಾಂಬ್ಳೆ, ಪಿಎಸ್‌ಐ ದಾದಾವಲಿ, ಮುಖಂಡರಾದ ರವೀಂದ್ರ ಜಲ್ದಾರ, ಶ್ರೀನಿವಾಸ ಪತಂಗೆ, ನರಸಪ್ಪ ಯಕ್ಲಾಸಪೂರ, ಭೀಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.