ತುಂಗಾ ಬಿಂಬ/ರಾಯಚೂರು: ಸರ್ಕಾರವು ಸಾಮಾಜಿಕ ನ್ಯಾಯ, ರೈತರ ಹಿತರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕರ್ನಾಟಕವನ್ನು ರಾಜ್ಯದ ಮಾದರಿ ಪ್ರದೇಶವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು. ಸೆಪ್ಟಂಬರ್ 17ರ ಗುರುವಾರ ದಂದು ರಾಯಚೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ರಾಷ್ಟ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಕಳೆದ 13 ವರ್ಷಗಳಲ್ಲಿ ಈ ಭಾಗದ ಅಭಿವೃದ್ಧಿಗೆ 30 ಸಾವಿರ ಕೋಟಿ ರೂ. ಅಧಿಕ ಅನುದಾನ ಹರಿದುಬಂದಿದೆ. ಪ್ರಸಕ್ತ ಸರ್ಕಾರವು ಕಳೆದ 40 ತಿಂಗಳುಗಳಲ್ಲಿ 1,45,000 ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳು ಸೇರಿದಂತೆ ಮೂಲಭೂತ ಸೌಕರ್ಯ ಹಾಗೂ ಜನರ ಕಲ್ಯಾಣಕ್ಕಾಗಿ ನೀಡಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳು, 41 ವಿಧಾನಸಭಾ ಕ್ಷೇತ್ರಗಳು, 50 ತಾಲೂಕುಗಳು ಹಾಗೂ ಸುಮಾರು 1.12 ಕೋಟಿ ಜನರ ಅಭಿವೃದ್ಧಿಗಾಗಿ 18,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಅಂಟಿದ್ದ "ಹಿಂದುಳಿದ ಪ್ರದೇಶ" ಎಂಬ ಹಣೆಪಟ್ಟಿಯನ್ನು ಒರೆಸಿಹಾಕಲು ಸರ್ಕಾರವು ನಿರಂತರ ಶ್ರಮಿಸುತ್ತಿದೆ. 1980ರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಅವಧಿಯಲ್ಲಿ ದಿವಂಗತ ಎನ್. ಧರಂಸಿAಗ್ ಅವರ ನೇತೃತ್ವದ ಈ ಭಾಗದ ಅಭಿವೃದ್ಧಿಗೆ ಸಮಿತಿಯನ್ನು ರಚಿಸಲಾಯಿತು. ಧರಂಸಿAಗ್ ಅವರು ಆಗ ವಸತಿ ಸಚಿವರಾಗಿದ್ದಾಗ ಈ ಭಾಗದಲ್ಲಿ ಪ್ರವಾಸ ಕೈಗೊಂಡು 'ಎಚ್ಕೆಡಿಬಿ' (ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ) ಸ್ಥಾಪನೆಗೆ ಶಿಫಾರಾಸು ಮಾಡಿದರು. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅವಧಿಯಲ್ಲಿ ಎಚ್ಕೆಡಿಬಿ ಸ್ಥಾಪನೆ ಆಯಿತು. ಮಾಜಿ ಸಚಿವ ಎನ್. ಎಸ್. ಬೋಸರಾಜು ಅವರು ಇದರ ಪ್ರಥಮ ಅಧ್ಯಕ್ಷರಾಗಿ ಮಂಡಳಿಯ ಚಟುವಟಿಕೆಗಳನ್ನು ಬಲಪಡಿಸಿದರು ಎಂದರು. 1999ರಲ್ಲಿ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎನ್. ಧರಂಸಿAಗ್ ಹಾಗೂ ಇತರೆ ಜನಪ್ರತಿನಿಧಿಗಳ ಒಗ್ಗಟ್ಟಿನ ಶ್ರಮದಿಂದ ಕೇಂದ್ರ ಸರ್ಕಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆರ್ಟಿಕಲ್ 371 (ಜೆ) ಶಿಫಾರಸು ಕಳುಹಿಸಲಾಯಿತು. 2009ರಲ್ಲಿ ರಾಹುಲ್ ಗಾಂಧಿ ಅವರ ಭರವಸೆಯಂತೆ, ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸಂಸದರಾಗಿದ್ದ ಧರಂಸಿAಗ್ ಹಾಗೂ ಹಿರಿಯ ನಾಯಕರ ಯತ್ನದಿಂದ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಆರ್ಟಿಕಲ್ 371 (ಜೆ) ತಿದ್ದುಪಡಿ ಕಾಯ್ದೆ ಅಂಗೀಕಾರವಾಯಿತು. 2012ರ ಡಿಸೆಂಬರ್ 28ರಂದು ಯುಪಿಎ ಸರ್ಕಾರದಿಂದ ಅನುಮೋದನೆಗೊಂಡು, 2013ರ ನವೆಂಬರ್ 6ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನುಷ್ಠಾನಕ್ಕೆ ಬಂದಿತು ಎಂದರು. ಅಕ್ಷರ ಆವಿಷ್ಕಾರ ಯೋಜನೆ: ಶಿಕ್ಷಣವೇ ಅತ್ಯಂತ ಶಕ್ತಿಶಾಲಿ ಅಸ್ತ ಎಂಬ ತತ್ತ್ವದಡಿ, 2023ನೇ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಿಸಲಾಗಿದೆ. ಈ ಯೋಜನೆಯಡಿ 2023ರಿಂದ 2026ರವರೆಗೆ ರಾಯಚೂರು ಜಿಲ್ಲೆಯೊಂದಕ್ಕೆ 201 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಇಸಿಸಿಇ, ದ್ವಿಭಾಷಾ ತರಗತಿಗಳು, ಎಲ್ಕೆಜಿ/ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ ಎಂದರು. ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಸ್ಥಾಪನೆ: ಮಹಾನಗರಗಳ ಮಾದರಿಯಲ್ಲಿ ಎಲ್ಕೆಜಿಯಿಂದ 12ನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿAದ 200 ಶಾಲೆಗಳು ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ 100 ಶಾಲೆಗಳು ಸೇರಿದಂತೆ ಒಟ್ಟು 300 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತಿ ಶಾಲೆಗೆ 3 ಕೋಟಿಯಿಂದ 10 ಕೋಟಿವರೆಗೂ ವೆಚ್ಚ ಮಾಡಲಾಗುತ್ತಿದೆ ಎಂದರು. ಆರೋಗ್ಯ ಹಾಗೂ ಉದ್ಯೋಗ ಆವಿಷ್ಕಾರ: ಆರೋಗ್ಯ ಆವಿಷ್ಕಾರ ಯೋಜನೆಗೆ 207 ಕೋಟಿ, ಉದ್ಯೋಗ ಆವಿಷ್ಕಾರಕ್ಕೆ 10 ಕೋಟಿ ಹಾಗೂ ಅರಣ್ಯ ಆವಿಷ್ಕಾರ ಯೋಜನೆಗೆ 100 ಕೋಟಿ ಅನುಸಂಧಾನ ಮಾಡಲಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂತರ್ಜಲ ಅಭಿವೃದ್ಧಿಗೆ ಈಗಾಗಲೇ 200 ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 250 ಕೋಟಿ ನೀಡಲಾಗುವುದು. ಅಲ್ಲದೆ ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲಭೂತ ರಸ್ತೆ ಸೌಕರ್ಯ ಸುಧಾರಿಸಲು 1000 ಕೋಟಿ ವೆಚ್ಚದಲ್ಲಿ ಸುಮಾರು 1,150 ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ: ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿ ಹಾಗೂ ಸುಡಳಿತಕ್ಕೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಹೊಸ ತಾಲೂಕುಗಳ ಘೋಷಣೆಯಾಗಿ ಸುಮಾರು ಏಳು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಆಡಳಿತ ಯಂತ್ರವನ್ನು ಮತ್ತಷ್ಟು ಬಲಪಡಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ತಲುಪಿಸಲು ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಅವುಗಳಲ್ಲಿ ನೂತನ ತಾಲೂಕುಗಳ ಪ್ರಜಾಸೌಧ ನಿರ್ಮಾಣ, ಇಂಡಸ್ಟ್ರಿಯಲ್ ಹಬ್ಗಳ ಸ್ಥಾಪನೆ ಹಾಗೂ ಕಲ್ಯಾಣ ಕರ್ನಾಟಕ ಆಡಳಿತ ಸುಧಾರಣೆಗೆ ಸಂಬAಧಿಸಿದAತೆ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಆಡಳಿತ ಸುಧಾರಣೆಗೆ ಸಂಬAಧಿಸಿದAತೆ ಪ್ರೊಫೆಸರ್ ಗೋವಿಂದರಾವ್ ಅವರ ಅಧ್ಯಕ್ಷತೆಯ ಸಮಿತಿಯು ಮಹತ್ವದ ವರದಿಯನ್ನು ಸಲ್ಲಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಡಾ. ಛಾಯಾ ದೇವಗಾಂವ್ಕರ್ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದ್ದು, ಈ ಭಾಗದ ಶಿಕ್ಷಣ ಸುಧಾರಣೆಗೆ ಸಂಬAಧಿಸಿದ ವರದಿಯನ್ನು ಸಲ್ಲಿಸಲಾಗಿದೆ ಎಂದರು. ದೃಢ ಸಂಕಲ್ಪ ಕಾರ್ಯಕ್ರಮ: ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಕಳೆದ 100 ದಿನಗಳ ಸಾಧನೆ ಹಾಗೂ ಮುಂದಿನ 500 ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳ ಕುರಿತು ದೃಢ ಸಂಕಲ್ಪ ಕಾರ್ಯಕ್ರಮದಲ್ಲಿ ಚರ್ಚಿಸಿ, ಕಾರ್ಯತಂತ್ರ ರೂಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಎಂತಹದೇ ಸವಾಲುಗಳಿದ್ದರೂ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದರು. ಈ ವೇಳೆ ಪಥ ಸಂಚಲನದಲ್ಲಿ ಭಾಗವಹಿಸಿ ಪೊಲೀಸ ಸೇರಿದಂತೆ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸುರಾಜು, ವಿಧಾನ ಪರಿಷತ್ ಸದಸ್ಯರಾದ ವಸಂತ ಕುಮಾರ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ಮುಖಂಡರಾದ ಕೆ.ಶಾಂತಪ್ಪ, ಜಿಂದಪ್ಪ, ಜಯಣ್ಣ, ಪತಂಗೆ ಜಯವಂತ ರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘಟನೆಯ ಮುಖಂಡರು, ವಿದ್ಯಾರ್ಥಿಗಳು ಇದ್ದರು. ಅಸ್ಕಿಹಾಳ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಯಶೋಧ ಹಾಗೂ ಗಾಜಗಣಪೇಠ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಮಹೇಶ್ವರಿ ಕಾರ್ಯಕ್ರಮ ನಡೆಸಿಕೊಟ್ಟರು.



