ತುಂಗಾ ಬಿಂಬ/ರಾಯಚೂರು: ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಮ್ಮ ಭೂಮಿ-ನಮ್ಮ ನೀರು-ನಮ್ಮ ಶಕ್ತಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಈ ವರ್ಷ 2026 ಎಲ್ ನೀನೋ ವರ್ಷವಾಗಿರುವುರಿಂದ ವಾಡಿಕೆ ಮಳೆ ಕಡಿಮೆಯಾಗಬಹುದಾದ ಸಂಭವವಿದ್ದು, ಕೃಷಿ, ಕುಡಿಯುವ ನೀರಿನ ಕೊರತೆಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ನೀರಿನ ಮಿತಬಳಕೆ ಮತ್ತು ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕಾಗಿದೆ. ಆದುದರಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ನೀರಿದ್ದರೆ ನಾಳೆ ಕಾರ್ಯಕ್ರಮದಡಿಯಲ್ಲಿ ಅಂತರ್ಜಲ ಬಳಕೆ & ನಿರ್ವಹಣೆ ಕುರಿತು ನಮ್ಮ ಭೂಮಿ-ನಮ್ಮ ನೀರು-ನಮ್ಮ ಶಕ್ತಿ ಎಂಬ ವಿಷಯದ ಕುರಿತಾಗಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಸೆಪ್ಟಂಬರ್ 11ರಂದು ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿ ಪೂರ್ಣ ಗೊಳಿಸಲಾಯಿತು. ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳು: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟ್ಟಗಿ ಗ್ರಾಮದ ಪಿ.ಎಂ.ಶ್ರೀ. ಆದರ್ಶ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ. ನಾಗರತ್ನ ಯತ್ನಟ್ಟಿ ಅವರು ಪ್ರಥಮ ಬಹುಮಾನ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕುಮಾರಿ. ಮಾಹಿನ್ ರಸೂಲ್ ದ್ವಿತೀಯ ಬಹುಮಾನ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನ ಗುಡಿ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕುಮಾರ. ಎಂ. ಯಮನೂರಪ್ಪ ಅವರು ತೃತೀಯ ಬಹುಮಾನ ಪಡೆದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸುರಾಜು, ವಿಧಾನ ಪರಿಷತ್ ಸದಸ್ಯರಾದ ವಸಂತ ಕುಮಾರ, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಹಿರಿಯ ಭೂವಿಜ್ಞಾನಿಗಳಾದ ಅರುಣ್ ಡಿ.ಇ. ಸೇರಿದಂತೆ ಇತರರು ಇದ್ದರು.



